×
Ad

ಪಾಕಿಸ್ತಾನಿ ಸೈನಿಕರ ಗುಂಡುದಾಳಿಗೆ ಜಗ್ಗದೆ ಪುಸ್ತಕಕ್ಕಾಗಿ ಮನೆಗೆ ಬಂದ ವಿದ್ಯಾರ್ಥಿ!

Update: 2016-10-07 19:31 IST

ಪಲ್ಲನ್ವಾಲಾ(ಜ-ಕಾ), ಸೆ.7: ಇಲ್ಲಿನ ಗಿಗ್ರಿಯಾಲ್ ಗ್ರಾಮದ ಮೇಲೆ ಮೋರ್ಟರ್ ಗುಂಡುಗಳ ಸುರಿಮಳೆಯಾಗುತ್ತಿರುವಂತೆಯೇ, 15ರ ಹರೆಯದ ಸುರೀಂದರ್ ಕುಮಾರ್ ಎಂಬ ವಿದ್ಯಾರ್ಥಿ, ಪುಸ್ತಕಗಳನ್ನು ತರುವುದಕ್ಕಾಗಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ತಾತ್ಕಾಲಿಕ ಶಿಬಿರದಿಂದ ಕೆಲವು ಮೈಲು ದೂರದ ತನ್ನ ಮನೆಗೆ ಬಂದಿದ್ದಾನೆ. ರಕ್ಷಣೆಗಾಗಿ ಓಡುವ ಮುನ್ನ ಅವನಿಂದ ಪುಸ್ತಕಗಳನ್ನು ಒಯ್ಯಲು ಸಾಧ್ಯವಾಗಿರಲಿಲ್ಲ.

ಪಲ್ಲನ್ವಾಲ್ ವಲಯದ ಮುಂಚೂಣಿಯ ಗಿಗ್ರಿಯಾಲ್ ಗ್ರಾಮದ 10ನೆ ತರಗತಿಯ ವಿದ್ಯಾರ್ಥಿ ಕುಮಾರ್ ಹಾಗೂ ಕುಟುಂಬದವರು ಪಾಕಿಸ್ತಾನವು ನಡೆಸಿದ ಅಪ್ರಚೋದಿತ ಗುಂಡುಹಾರಾಟದಿಂದ ಪಾರಾಗಲು ಅವಸರವಸರವಾಗಿ ಮನೆಯನ್ನು ತ್ಯಜಿಸಿ, ಹತ್ತಿರದ ಸುರಕ್ಷಿತ ಶಿಬಿರಕ್ಕೆ ಬರಬೇಕಾಯಿತು.

ಗುಂಡುಗಳು ತಮ್ಮ ಗ್ರಾಮದೊಳಗೆ ಬೀಳಲಾರಂಭಿಸಿದೊಡನೆಯೇ ತಾವು ಅವಸರವಾಗಿ ಮನೆಯನ್ನು ಬಿಡಬೇಕಾಯಿತು. ತನ್ನಿಂದ ಶಾಲಾ ಚೀಲವನ್ನು ತರಲು ಸಾಧ್ಯವಾಗಿರಲಿಲ್ಲ. ತನಗೆ ರಾತ್ರಿಯಿಡೀ ನಿದ್ದೆಯೇ ಬರಲಿಲ್ಲ. ಮರುದಿನ ನಸುಕಿನಲ್ಲಿ ಮನೆಗೆ ಹೋಗಿ ಶಾಲಾ ಚೀಲವನ್ನು ತರಲು ನಿರ್ಧರಿಸಿದೆ. ಅದಕ್ಕಾಗಿ ಹಲವು ಕಿ.ಮೀ.ಗಳಷ್ಟು ನಡೆಯಬೇಕಿತ್ತು. ತನ್ನನ್ನು ಸೈನಿಕರು ತಡೆದರು. ಆಗ ತಾನವರಿಗೆ ಶಾಲಾ ಚೀಟಿ ತರಲು ಹೋಗುತ್ತಿದ್ದೇನೆಂದು ತಿಳಿಸಿದೆ. ಒಬ್ಬರು ಅಧಿಕಾರಿ ತನಗೆ ಸಹಾಯ ಮಾಡಿದರೆಂದು ಕುಮಾರ್ ವಿವರಿಸಿದ್ದಾರೆ.

ತಾನು ಮನೆಗೆ ಹೋಗುತ್ತಿದ್ದಂತೆಯೇ ಗುಂಡುಗಳ ಮೊರೆತ ಆರಂಭವಾಯಿತು. ಇದರಿಂದಾಗಿ ತಾನು ಹಾಗೂ ಜಾನುವಾರುಗಳಿಗೆ ಮೇವು ಹಾಕಲೆಂದು ಮನೆಗಳಿಗೆ ಬಂದಿದ್ದ ಇತರ ಕೆಲವು ಗ್ರಾಮಸ್ಥರು ಅಡಗಿಕೊಳ್ಳಬೇಕಾಯಿತೆಂದು ಆತ ಹೇಳಿದ್ದಾನೆ.

ಅಧಿಕಾರಿಗಳು ತಾತ್ಕಾಲಿಕ ಶಿಬಿರವಾಗಿ ಪರಿವರ್ತಿಸಿರುವ ಖೌರ್‌ನ ಸರಕಾರಿ ಶಾಲೆಯ ತಾತ್ಕಾಲಿಕ ಕೊಠಡಿಯೊಂದರಲ್ಲಿ ಕುಮಾರ್ ಈಗ ಕಲಿಯುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News