ಪಾಕ್ 'ಭಯೋತ್ಪಾದಕ ದೇಶ' ಘೋಷಣೆಗೆ ಬೆಂಬಲವಿಲ್ಲ:ಅಮೆರಿಕ
ವಾಶಿಂಗ್ಟನ್, ಅ. 7: ಪಾಕಿಸ್ತಾನವನ್ನು 'ಭಯೋತ್ಪಾದಕ ದೇಶ' ಎಂಬುದಾಗಿ ಘೋಷಿಸುವ ಪ್ರಸ್ತಾಪಕ್ಕೆ ತಾನು ಬೆಂಬಲ ನೀಡುವುದಿಲ್ಲ, ಆದರೆ, ಆ ದೇಶದಲ್ಲಿರುವ ಭಯೋತ್ಪಾದಕರ ಆಶ್ರಯ ತಾಣಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಆ ವಲಯದ ಸರಕಾರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವೆ ಎಂದು ಅಮೆರಿಕ ಶುಕ್ರವಾರ ಹೇಳಿದೆ.
ಕಾಶ್ಮೀರ ವಿವಾದ ಮತ್ತು ಇತ್ತೀಚಿನ ಉದ್ವಿಗ್ನತೆಗಳನ್ನು ಕಡಿಮೆ ಮಾಡುವುದು ಸೇರಿದಂತೆ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನಗಳ ನಡುವೆ 'ಅರ್ಥಪೂರ್ಣ ಮಾತುಕತೆ' ನಡೆಯಬೇಕು ಎಂಬುದಾಗಿಯೂ ಅದು ಕರೆ ನೀಡಿದೆ.
ಆದಾಗ್ಯೂ, ಪಾಕಿಸ್ತಾನವು ತನ್ನ ಪರಮಾಣು ಅಸ್ತ್ರಗಳನ್ನು ಭಯೋತ್ಪಾದಕರ ಕೈಗೆ ಸಿಗದಂತೆ ಸುರಕ್ಷಿತವಾಗಿ ಇರಿಸಿರಬಹುದು ಎಂಬ ವಿಶ್ವಾಸವನ್ನು ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ವ್ಯಕ್ತಪಡಿಸಿದರು.
ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂಬುದಾಗಿ ಘೋಷಿಸುವ ಮಸೂದೆ ಮತ್ತು ಆನ್‌ಲೈನ್ ಸಹಿ ಅಭಿಯಾನಗಳ ಬಗ್ಗೆ ಕೇಳಿದ ಪ್ರಶ್ನೆಗೆ ತನ್ನ ದೈನದಂದಿನ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಅವರು, ''ಕಾಂಗ್ರೆಸ್‌ನಲ್ಲಿ ಇಂಥ ಮಸೂದೆಯೊಂದು ಮಂಡನೆಯಾಗಿರುವುದು ನನಗೆ ಗೊತ್ತಿಲ್ಲ ಹಾಗೂ ಖಂಡಿತವಾಗಿಯೂ ನಾವು ಅದನ್ನು ಬೆಂಬಲಿಸುವುದಿಲ್ಲ'' ಎಂದರು.