ರಣಜಿ ಟ್ರೋಫಿ: ಬರೋಡಾ, ಸೌರಾಷ್ಟ್ರ, ಮ.ಪ್ರದೇಶ ಬೃಹತ್ ಮೊತ್ತ

Update: 2016-10-07 18:24 GMT

ಜೈಪುರ, ಅ.7: ರಣಜಿ ಟ್ರೋಫಿಯ ಎರಡನೆ ದಿನದಾಟವಾದ ಶುಕ್ರವಾರ ಬರೋಡಾ, ಮಧ್ಯಪ್ರದೇಶ ಹಾಗೂ ಸೌರಾಷ್ಟ್ರ ತಂಡಗಳು ಬೃಹತ್ ಸ್ಕೋರ್ ದಾಖಲಿಸಿ ಗಮನ ಸೆಳೆದವು. ಮಧ್ಯಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹರ್‌ಪ್ರೀತ್ ಸಿಂಗ್ ಔಟಾಗದೆ ದ್ವಿಶತಕ ಬಾರಿಸಿ ಮಿಂಚಿದರು.

ಹೈದರಾಬಾದ್‌ನಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಉತ್ತರ ಪ್ರದೇಶದ ವಿರುದ್ಧ 465 ರನ್ ಗಳಿಸಿ ಆಲೌಟಾಗಿದೆ. ಇದಕ್ಕೆ ಉತ್ತರವಾಗಿ ಉತ್ತರ ಪ್ರದೇಶ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ.

    ಮಧ್ಯಪ್ರದೇಶ ತಂಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹರ್‌ಪ್ರೀತ್ ಸಿಂಗ್ ಬಾರಿಸಿದ ಅಜೇಯದ್ವಿಶತಕ(216 ರನ್, 274 ಎಸೆತ, 25 ಬೌಂಡರಿ, 4 ಸಿಕ್ಸರ್) ನೆರವಿನಿಂದ 465 ರನ್ ಗಳಿಸಿತು. ಜೈಪುರದಲ್ಲಿ ನಡೆದ ಎ ಗುಂಪಿನ ಮತ್ತೊಂದು ಪಂದ್ಯದಲ್ಲಿ ಆದಿತ್ಯ ವಾಘ್ಮೋಡೆ(142 ರನ್) ಹಾಗೂ ದೀಪಕ್ ಹೂಡಾ(118) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಬರೋಡಾ ತಂಡ ಗುಜರಾತ್‌ನ ವಿರುದ್ಧ 8 ವಿಕೆಟ್ ನಷ್ಟಕ್ಕೆ 544 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆದಿತ್ಯ-ದೀಪಕ್ ಜೋಡಿ 3ನೆ ವಿಕೆಟ್‌ಗೆ 175 ರನ್ ಜೊತೆಯಾಟ ನಡೆಸಿತು. ದಿನದಾಟದಂತ್ಯಕ್ಕೆ ಗುಜರಾತ್ ವಿಕೆಟ್ ನಷ್ಟವಿಲ್ಲದೆ 34 ರನ್ ಗಳಿಸಿದೆ.

ಶಾ ಶತಕ, ಸೌರಾಷ್ಟ್ರ 430: ವಿಝಿಯನಗರಂನಲ್ಲಿ ನಡೆದ ಬಿ ಗುಂಪಿನ ಪಂದ್ಯದ 2ನೆ ದಿನದಾಟದಲ್ಲಿ ಸೌರಾಷ್ಟ್ರ ತಂಡ ನಾಯಕ ಜೈದೇವ್ ಶಾ ಬಾರಿಸಿದ ಶತಕದ ನೆರವಿನಿಂದ 430 ರನ್ ಕಲೆ ಹಾಕಿತು.

 ಶಾ 228 ಎಸೆತಗಳಲ್ಲಿ 36 ಬೌಂಡರಿ ಬಾರಿಸಿ ತಂಡವನ್ನು ಏಕಾಂಗಿಯಾಗಿ ಉತ್ತಮ ಮೊತ್ತದತ್ತ ಕೊಂಡೊಯ್ದರು. 4 ಹಾಗೂ 6ನೆ ವಿಕೆಟ್ ಜೊತೆಯಾಟದಲ್ಲಿ ವ್ಯಾಸ್ ಹಾಗೂ ಜಾನಿ ಅವರೊಂದಿಗೆ ಕ್ರಮವಾಗಿ 119 ಹಾಗೂ 110 ರನ್ ಸೇರಿಸಿದ ಶಾ ತಂಡವನ್ನು ಆಧರಿಸಿದರು.

ಸೋಲಿನ ಭೀತಿಯಲ್ಲಿ ತಮಿಳುನಾಡು:

ತಮಿಳುನಾಡು ತಂಡ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 176 ರನ್‌ಗೆ ನಿಯಂತ್ರಿಸಿತು. ಆದರೆ, 89ರನ್ ಹಿನ್ನಡೆ ಅನುಭವಿಸಿತು. 2ನೆ ಇನಿಂಗ್ಸ್ ಆರಂಭಿಸಿರುವ ತಮಿಳುನಾಡು 153ರನ್‌ಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದೆ. ಕೇವಲ 64 ರನ್ ಮುನ್ನಡೆಯಲ್ಲಿದೆ.

ಛತ್ತೀಸ್‌ಗಡಕ್ಕೆ ಮುನ್ನಡೆ: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಅಶುತೋಷ್ ಸಿಂಗ್ ಬಾರಿಸಿದ ಶತಕ(140 ರನ್) ಸಹಾಯದಿಂದ ಚೊಚ್ಚಲ ಪಂದ್ಯ ಆಡುತ್ತಿರುವ ಛತ್ತೀಸ್‌ಗಡ ತಂಡ ತ್ರಿಪುರಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 255 ರನ್ ಗಳಿಸಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 137 ರನ್ ಮುನ್ನಡೆ ಸಾಧಿಸಿತು.

ರಣಜಿ ಟ್ರೋಫಿ 2ನೆ ದಿನದ ಫಲಿತಾಂಶ

ಭುವನೇಶ್ವರ: ಆಂಧ್ರ ವಿರುದ್ಧ ಹಿಮಾಚಲ ಪ್ರದೇಶ 318/7

ವಡೋದರ: ದಿಲ್ಲಿ 241/3, ಅಸ್ಸಾಂ 193

ಜೈಪುರ: ಬರೋಡ 544/8 ಡಿಕ್ಲೇರ್, ಗುಜರಾತ್ 34/0

ರಾಂಚಿ: ತ್ರಿಪುರಾ 118,10/0 ಛತ್ತೀಸ್‌ಗಡ 255

ನಾಗ್ಪುರ: ಗೋವಾ 164, ಹೈದರಾಬಾದ್ 188/4

ಮುಂಬೈ: ಹರ್ಯಾಣ 117/3, ಸರ್ವಿಸಸ್ 197

ದಿಲ್ಲಿ: ಮಹಾರಾಷ್ಟ್ರ 210, ಜಾರ್ಖಂಡ್ 293/7

ಕಲ್ಯಾಣಿ: ಜಮ್ಮು-ಕಾಶ್ಮೀರದ ವಿರುದ್ಧ ಕೇರಳ 282/7

  ಹೈದರಾಬಾದ್: ಮಧ್ಯ ಪ್ರದೇಶ 465, ಉತ್ತರಪ್ರದೇಶ 131/5

 ರೋಹ್ಟಕ್: ತಮಿಳುನಾಡು 87,153/6, ಮುಂಬೈ 176

ವಿಶಾಖಪಟ್ಟಣ: ವಿದರ್ಭ 182/2, ಒಡಿಶಾ 150

 ದಿಲ್ಲಿ: ಪಂಜಾಬ್ 154/4, ರೈಲ್ವೇಸ್ 331

ವಿಝಿಯನಗರಂ: ರಾಜಸ್ಥಾನ 12/0, ಸೌರಾಷ್ಟ್ರ 430

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News