ಭಾರತಕ್ಕಿಂತ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹೆಚ್ಚಿನ ಸಮಾನತೆ:ಮೇನಕಾ ಗಾಂಧಿ

Update: 2016-10-08 10:05 GMT

ಹೊಸದಿಲ್ಲಿ,ಅ.8: ಇಸ್ಲಾಮಿಕ್ ರಾಷ್ಟ್ರಗಳಲ್ಲಿಯ ಮುಸ್ಲಿಮ್ ಮಹಿಳೆಯರು ಭಾರತೀಯ ಮುಸ್ಲಿಮ್ ಮಹಿಳೆಯರಿಗಂತ ಹೆಚ್ಚಿನ ಸಮಾನತೆಯನ್ನು ಅನುಭವಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿಯವರು ಇಲ್ಲಿ ಹೇಳಿದ್ದಾರೆ. ಮೂರು ಬಾರಿ ತಲಾಖ್ ಹೇಳುವ ಪದ್ಧತಿಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರವು ಸಲ್ಲಿಸಿರುವ ಉತ್ತರಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು. ಸಂವಿಧಾನದ ಆಧಾರದಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನಿನ ಪುನರ್‌ಪರಿಶೀಲನೆಗೆ ಕೇಂದ್ರವು ಒಲವು ವ್ಯಕ್ತಪಡಿಸಿದೆ.

ಮೂರು ಬಾರಿ ತಲಾಖ್ ಹೇಳುವ ಪದ್ಧತಿಯ ಕುರಿತಂತೆ ಕೇಂದ್ರದ ನಿಲುವು ಸರಿಯಾಗಿದೆ. ಮಹಿಳೆಯರ ಹಕ್ಕುಗಳ ಬಗಗೆ ನಾವು ಯೋಚಿಸಬೇಕು. ಮಹಿಳೆಯರು ಹೆಚ್ಚಿನ ಸಮಾನತೆಯನ್ನು ಅನುಭವಿಸುತ್ತಿರುವ ಇತರ ಮುಸ್ಲಿಮ್ ರಾಷ್ಟ್ರಗಳಲ್ಲಿ ಈ ಪರಿಪಾಠ ಅಸ್ತಿತ್ವದಲ್ಲಿಲ್ಲ ಎಂದು ಅವರು ಮೇನಕಾ ಹೇಳಿದರು.

ಕಾನೂನು ಮತ್ತು ನ್ಯಾಯ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ತನ್ನ ಪ್ರಮಾಣಪತ್ರದಲ್ಲಿ ಲಿಂಗ ಸಮಾನತೆ ಮತ್ತು ಜಾತ್ಯತೀತತೆಯಂತಹ ಸಾಂವಿಧಾನಿಕ ತತ್ತ್ವಗಳನ್ನು ಪ್ರಸ್ತಾಪಿಸಿದೆ.

ಮೂರು ಬಾರಿ ತಲಾಖ್ ಹೇಳುವ ಪದ್ಧತಿ,ನಿಕ್ಹಾ ಹಲಾಲಾ ಮತ್ತು ಬಹುಪತ್ನಿತ್ವ ಇವುಗಳು ಲಿಂಗ ನ್ಯಾಯದ ನಿಷ್ಪಕ್ಷಪಾತ ನೀತಿ, ಘನತೆ ಮತ್ತು ಸಮಾನತೆಯ ತತ್ತ್ವಗಳ ಬೆಳಕಿನಲ್ಲಿ ಪುನರ್‌ಪರಿಶೀಲನೆಗೊಳ್ಳಬೇಕು ಎಂದು ಅದು ಹೇಳಿದೆ.

ಮಹಿಳೆಯರಿಗೆ ಸಮಾನ ಸ್ಥಾನಮಾನ ನಿರಾಕರಣೆಗೆ ಧರ್ಮವು ಕಾರಣವಾಗಲು ಸಾಧ್ಯವಿಲ್ಲ ಎಂದು ಕೇಂದ್ರವು ಹೇಳಿದೆ.

ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಭಾರತೀಯ ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಸಲ್ಲಬೇಕಾದ ಸಮಾನ ಸ್ಥಾನಮಾನ ಮತ್ತು ಘನತೆಯನ್ನು ನಿರಾಕರಿಸಲು ಧರ್ಮವು ಒಂದು ಕಾರಣವಾಗಬಹುದೇ ಎನ್ನುವುದನ್ನು ಈ ನ್ಯಾಯಾಲಯವು ನಿರ್ಧರಿಸಬೇಕಾಗಿರುವ ಮೂಲಭೂತ ಪ್ರಶ್ನೆಯಾಗಿದೆ ಎಂದು ಹೇಳಿರುವ ಕೇಂದ್ರವು, ಲಿಂಗ ನ್ಯಾಯದ ಬೆಳಕಿನಲ್ಲಿ ವೈಯಕ್ತಿಕ ಕಾನೂನುಗಳ ಪುನರ್‌ಪರಿಶಿಲನೆ ಅಗತ್ಯವಿದೆ ಎಂದೂ ಅದು ಒತ್ತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News