ಸತತ 68 ದಿನಗಳ ಕಾಲ ಉಪವಾಸ ನಿರತ ಶಾಲಾ ಬಾಲಕಿ ಮೃತ್ಯುವಶ

Update: 2016-10-08 10:03 GMT

 ಹೈದರಾಬಾದ್, ಅ.8: ಹೆತ್ತವರ ಬಲವಂತದಿಂದ ಜೈನ ಧರ್ಮದಲ್ಲಿ ಆಚರಣೆಯಲ್ಲಿರುವ ಸತತ 68 ದಿನಗಳ ಕಾಲ ನಡೆಸುವ ತಪಸ್ಯಾ ವೃತ ನಡೆಸಿದ 13ರ ಹರೆಯದ ಶಾಲಾ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಹೈದರಾಬಾದ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಅ.3 ರಂದು ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಮಕ್ಕಳ ಹಕ್ಕು ಸಂಸ್ಥೆಯು ಮೃತ ಬಾಲಕಿಯ ಹೆತ್ತವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿಯ ಹೆತ್ತವರು ‘ತಪಸ್ಯಾ’ವೃತ(ಪ್ರಾಯಶ್ಚಿತಕ್ಕಾಗಿ ದೇಹದಂಡನೆ) ಆಚರಿಸಲು ಒತ್ತಾಯ ಪಡಿಸಿದ್ದರು ಸಂಸ್ಥೆ ದೂರಿನಲ್ಲಿ ಆರೋಪಿಸಿದೆ.

8ನೆ ತರಗತಿಯ ವಿದ್ಯಾರ್ಥಿನಿ ಆರಾಧನಾ ತಪಸ್ಯಾ ವೃತದ ಕೊನೆಯ ದಿನ(68ನೆ ದಿನ) ಅ.2 ರಂದು ಸಂಜೆ ಕುಸಿದು ಬಿದ್ದಿದ್ದು, ತಕ್ಷಣವೇ ಸಿಕಂದರಾಬಾದ್‌ನ ಕೃಷ್ಣಾ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು. ಅ.3ರ ಬೆಳಗ್ಗೆ ಬಾಲಕಿ ಮೃತಪಟ್ಟಿದ್ದಾಳೆ. ಆರಾಧನಾ ಸಿಕಂದರಾಬಾದ್‌ನಲ್ಲಿ ಪ್ರಸಿದ್ಧ ಚಿನ್ನಾಭರಣ ಮಳಿಗೆ ಹೊಂದಿರುವ ದಂಪತಿಯ ಏಕೈಕ ಪುತ್ರಿಯಾಗಿದ್ದಳು. ಆರಾಧನಾಳಿಗೆ ಆಕೆಯ ಹೆತ್ತವರೇ ತಪಸ್ಯಾ ವೃತ ಆಚರಿಸಲು ಬಲವಂತಪಡಿಸಿದ್ದರು. ಕುಟುಂಬದ ವ್ಯವಹಾರ ವೃದ್ದಿಯಾಗಲು ಈ ವೃತ ಆಚರಿಸಬೇಕೆಂದು ಕುಟುಂಬದ ಗುರು ಸಲಹೆ ನೀಡಿದ ಕಾರಣ ಹೆತ್ತವರು ಈ ದುಸ್ಸಾಹಸ ನಡೆಸಿದ್ದರು ಎಂದು ಮಕ್ಕಳ ಹಕ್ಕು ಸಂಸ್ಥೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದೆ.

 ‘‘ತಪಸ್ಯಾ ವೃತ ಆಚರಿಸುತ್ತಿದ್ದ ಬಾಲಕಿಗೆ ಸಂಜೆ 6ರ ಬಳಿಕ ನೀರನ್ನು ಮಾತ್ರ ನೀಡಲಾಗುತ್ತಿತ್ತು. 68ನೆ ದಿನದ ಕೊನೆಯಲ್ಲಿ ಪೂಜೆ ನಡೆಸಲಾಗುತ್ತದೆ. ಸಿಕಂದರಾಬಾದ್‌ನ ಜೈನ ಮಂದಿರದಲ್ಲಿ ಪೂಜೆ ನಡೆಯುತ್ತಿದ್ದಾಗಲೇ ಬಾಲಕಿ ತಲೆ ಸುತ್ತು ಬಂದು ಕುಸಿದುಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಫಲಕಾರಿಯಾಗಲಿಲ್ಲ’’ ಎಂದು ಸಂಸ್ಥೆಯ ಅಧ್ಯಕ್ಷ ಅಚ್ಯುತಾ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News