ಜೈಷ್-ಎ-ಮೊಹಮ್ಮದ್‌ನ್ನು ಸೃಷ್ಟಿಸಿದ್ದು ಬಿಜೆಪಿ:ಕಪಿಲ್ ಸಿಬಲ್

Update: 2016-10-08 10:58 GMT

ಹೊಸದಿಲ್ಲಿ,ಅ.8: ನಿಯಂತ್ರಣ ರೇಖೆಯಲ್ಲಿ ಸೇನೆಯ ಸರ್ಜಿಕಲ್ ದಾಳಿಗಳ ರಾಜಕೀಕರಣಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ವಿರುದ್ಧ ಕೊಲೆ ಪ್ರಕರಣವಿರುವವರು,ಜೈಲಿಗೆ ಹೋದವರು ರಾಹುಲ್ ಗಾಂಧಿಯವರನ್ನು ಪ್ರಶ್ನಿಸುವ ಸ್ಥಿತಿಯಲ್ಲಿಲ್ಲ ಎಂದು ಸಿಬಲ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಪ್ರಸ್ತಾಪಿಸಿ ಹೇಳಿದರು. ಶಾ ಇದಕ್ಕೂ ಮುನ್ನ ಹತಾಶ ಪಾಕಿಸ್ತಾನದ ಜೊತೆ ಗುರುತಿಸಿಕೊಳ್ಳುತ್ತಿರುವುದಕ್ಕಾಗಿ ಕಾಂಗ್ರೆಸ್‌ನ್ನು ಟೀಕಿಸಿದ್ದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಬಲ್, ಬಿಜೆಪಿ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜೈಷ್-ಎ-ಮೊಹಮ್ಮದ್‌ನ ಮುಖ್ಯಸ್ಥ ಮಸೂದ್ ಅಜರ್‌ನನ್ನು ಬಿಡುಗಡೆಗೊಳಿಸಿರದಿದ್ದರೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಇಷ್ಟೊಂದು ಹದಗೆಡುತ್ತಿರಲಿಲ್ಲ. ಜೈಷ್‌ನ್ನು ಸೃಷ್ಟಿಸಿದ್ದೇ ಬಿಜೆಪಿ ಎಂದು ಹೇಳಿದರು.

ಸರ್ಜಿಕಲ್ ದಾಳಿಯ ಎಲ್ಲ ಹೆಗ್ಗಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡುವ ಮೂಲಕ ಬಿಜೆಪಿಯು ಸೇನೆಯ ಶೌರ್ಯವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಅವರು,ಇದನ್ನೆಲ್ಲ ನಿಲ್ಲಿಸಿ. ಸರ್ಜಿಕಲ್ ದಾಳಿಗಾಗಿ ಸೇನೆಯನ್ನು ಪ್ರಶಂಸಿಸ ಬೇಕು,ಹೀಗಾಗಿ ರಾಜಕೀಯವನ್ನು ನಿಲ್ಲಿಸಿ ಎಂದರು.

ದೇಶದ ರಕ್ಷಣೆಗಾಗಿ ಭದ್ರತಾ ಪಡೆಗಳು ಗಡಿ ದಾಟಿದ್ದ ಈ ಹಿಂದಿನ ಎಲ್ಲ ಘಟನೆಗಳ ವಿವರಗಳನ್ನು ನೀಡಿದ ಅವರು, ಭಾರತದ ಇತಿಹಾಸ 2014ರಿಂದ ಆರಂಭಗೊಂಡಿದ್ದಲ್ಲ ಎನ್ನುವ ಮೂಲಕ ಭಾರತೀಯ ಸೇನೆಯು ಇದೇ ಮೊದಲ ಬಾರಿಗೆ ಗಡಿಯನ್ನು ದಾಟಿದೆ ಎಂಬ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News