‘ಸ್ವಚ್ಛಭಾರತ’ ಕಾರ್ಯಕ್ರಮ ಈಜಿಪ್ಟ್ ಯೋಜನೆಯ ರೂಪಾಂತರ: ವಿಶ್ವಬ್ಯಾಂಕ್
ವಾಶಿಂಗ್ಟನ್, ಅ. 8: ಭಾರತದ 7000 ಕೋಟಿ ರೂಪಾಯಿ ವೆಚ್ಚದ ಮಹತ್ವಾಕಾಂಕ್ಷೆಯ ಸ್ವಚ್ಛಭಾರತ ಗ್ರಾಮೀಣ ನೈರ್ಮಲ್ಯ ಯೋಜನೆಯು ಈಜಿಪ್ಟ್‌ನ ಇಂಥದೇ ಯಶಸ್ವಿ ಕಾರ್ಯಕ್ರಮವೊಂದರ ರೂಪಾಂತರವಾಗಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಹೇಳಿದ್ದಾರೆ. ಶ್ರೇಷ್ಠ ಜಾಗತಿಕ ಆಚರಣೆಗಳನ್ನು ಹಂಚಿಕೊಳ್ಳುವುದಕ್ಕೆ ಇದೊಂದು ಉದಾಹರಣೆ ಎಂದಿದ್ದಾರೆ.
‘‘ನಮ್ಮ ಈ ಸಂಘಟನೆ ಹಾಗೂ ಕಕ್ಷಿದಾರ ದೇಶಗಳಿಗೆ ಜ್ಞಾನ ಹರಿದುಬರುತ್ತಿದೆ. ಇದು ಸೃಜನಶೀಲತೆ ಮತ್ತು ಹೊಸತನಕ್ಕೆ ಕಾರಣವಾಗಿದೆ’’ ಎಂದು ಇಲ್ಲಿ ನಡೆದ ವಿಶ್ವಬ್ಯಾಂಕ್ ಗುಂಪಿನ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಕಿಮ್ ಹೇಳಿದರು.
ವಿಶ್ವಬ್ಯಾಂಕ್ ಜ್ಞಾನ ಮತ್ತು ಅನುಭವವನ್ನು ಯಶಸ್ವಿಯಾಗಿ ವಿವಿಧ ವಲಯಗಳಿಗೆ ಹಸ್ತಾಂತರಿಸಿದೆ ಎಂದರು.
‘‘ನಮ್ಮ ‘ಜಾಗತಿಕ ಆಚರಣೆಗಳು’ ಎಂಬ ನೂತನ ವ್ಯವಸ್ಥೆಯಿಂದಾಗಿ ದೇಶಗಳ ನಡುವೆ ಜ್ಞಾನ ಹಂಚಿಕೆ ಸುಲಭವಾಗಿದೆ ಮತ್ತು ವೇಗವಾಗಿ ನಡೆಯುತ್ತಿದೆ. ಉದಾಹರಣೆಗೆ; ಸ್ವಚ್ಛತಾ ಸೇವೆಗಳನ್ನು ಬಡವರಿಗೆ ವಿಸ್ತರಿಸುವ ಮಹತ್ವದ ಯೋಜನೆಯೊಂದನ್ನು ಸಿದ್ಧಪಡಿಸುವುದಕ್ಕಾಗಿ ಭಾರತ ಸರಕಾರವು ವಿಶ್ವಬ್ಯಾಂಕ್‌ಗೆ ಬಂದಾಗ, ಈಜಿಪ್ಟ್‌ನ ಗ್ರಾಮೀಣ ಸ್ವಚ್ಛತಾ ಕಾರ್ಯಕ್ರಮದ ಜ್ಞಾನ ಮತ್ತು ಅನುಭವವನ್ನು ವರ್ಗಾಯಿಸಲು ನಮಗೆ ಸಾಧ್ಯವಾಯಿತು’’ ಎಂದು ವಿಶ್ವಬ್ಯಾಂಕ್ ಅಧ್ಯಕ್ಷರು ಹೇಳಿದರು.
ಈ ಜ್ಞಾನ ಹಂಚಿಕೆಯ ಫಲವಾಗಿ ಭಾರತದಲ್ಲಿ 1 ಬಿಲಿಯ ಡಾಲರ್ ವೆಚ್ಚದ ಸ್ವಚ್ಛ ಭಾರತ ಗ್ರಾಮೀಣ ನೈರ್ಮಲ್ಯ ಯೋಜನೆ ಜಾರಿಗೆ ಬಂದಿತು. ಸ್ಥಳೀಯ ಆಡಳಿತ, ಪಾರದರ್ಶಕತೆ ಮತ್ತು ನಾಗರಿಕರಿಗೆ ಉತ್ತರದಾಯಿತ್ವ ಮುಂತಾದ ಕ್ಷೇತ್ರಗಳಲ್ಲಿ ಉತ್ತಮ ಸೇವೆಗಳನ್ನು ನೀಡಿದ ಈಜಿಪ್ಟ್‌ನ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳಲಾಯಿತು ಎಂದು ಕಿಮ್ ತಿಳಿಸಿದರು.