×
Ad

ಟ್ರಂಪ್ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ವೀಡಿಯೊ ಬಹಿರಂಗ

Update: 2016-10-08 20:08 IST

ವಾಶಿಂಗ್ಟನ್, ಅ. 8: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್, ತನ್ನ ಸ್ನೇಹಿತರೊಬ್ಬರೊಂದಿಗೆ ಮಹಿಳೆಯರ ಬಗ್ಗೆ ಅಸಹ್ಯ ಮತ್ತು ಅಶ್ಲೀಲವಾಗಿ ಆಡಿರುವ ಮಾತುಗಳನ್ನೊಳಗೊಂಡ 2005ರ ವೀಡಿಯೊವೊಂದು ಹೊರಬಿದ್ದಿದೆ.

ಇದರಿಂದ ತೀವ್ರ ಮುಜುಗರಕ್ಕೊಳಗಾಗಿರುವ ಟ್ರಂಪ್, ಶುಕ್ರವಾರ ತಡರಾತ್ರಿ ವೀಡಿಯೊ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.

2005ರಲ್ಲಿ ‘ಎಕ್ಸೆಸ್ ಹಾಲಿವುಡ್’ ಎಂಬ ಟಿವಿ ಕಾರ್ಯಕ್ರಮವೊಂದರ ನಟ ಬಿಲ್ಲಿ ಬುಶ್‌ರೊಂದಿಗೆ ಬಸ್ಸೊಂದರಲ್ಲಿ ಅವರು ಈ ಮಾತುಗಳನ್ನು ಆಡಿದ್ದರು. ಅವರು ‘ಡೇಸ್ ಆಫ್ ಅವರ್ ಲೈವ್ಸ್’ನ ಸೆಟ್‌ಗೆ ಟ್ರಂಪ್‌ರ ಚಿತ್ರೀಕರಣಕ್ಕಾಗಿ ಬರುತ್ತಿದ್ದರು.

ಈ ಸಂದರ್ಭದಲ್ಲಿ ಅವರು ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದರು. ‘‘ನೀವೊಬ್ಬ ತಾರೆಯಾಗಿದ್ದರೆ, ಮಹಿಳೆಯರು ಏನು ಮಾಡಲು ಬೇಕಾದರೂ ಬಿಡುತ್ತಾರೆ’’ ಎಂದೂ ಹೇಳಿದ್ದರು.

ತನ್ನ ವೀಡಿಯೊ ಹೇಳಿಕೆಯಲ್ಲಿ ಟ್ರಂಪ್ ಹೀಗೆ ಹೇಳಿದ್ದಾರೆ: ‘‘ನಾನು ಹಾಗೆ ಹೇಳಿದ್ದೆ. ಅದು ತಪ್ಪು. ನಾನು ಕ್ಷಮೆ ಕೋರುತ್ತೇನೆ’’.

ಆದರೆ, ಅದೇ ವೇಳೆ, ಈ ವೀಡಿಯೊ ಬಹಿರಂಗವಾಗಿರುವುದು ‘‘ನಾವು ಇಂದು ಎದುರಿಸುತ್ತಿರುವ ನೈಜ ವಿಷಯಗಳಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಮಾಡಿದ ತಂತ್ರವಾಗಿದೆ’’ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

ತನ್ನ ‘‘ಮೂರ್ಖತನದ’’ ಮಾತುಗಳು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‌ರ ಮಾತುಗಳು ಮತ್ತು ಕೃತಿಗಳಿಗಿಂತ ಭಿನ್ನವಾಗಿವೆ ಎಂದು ಹೇಳಿದ್ದಾರೆ. ಬಿಲ್ ಕ್ಲಿಂಟನ್ ಮಹಿಳೆಯರ ಶೋಷಣೆ ಮಾಡಿದ್ದಾರೆ ಎಂಬುದಾಗಿ ಟ್ರಂಪ್ ಆರೋಪಿಸಿದರೆ, ಅವರ ಹೆಂಡತಿ ಹಾಗೂ ಹಾಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ತನ್ನ ಗಂಡನ ಬಲಿಪಶುಗಳನ್ನು ‘‘ಹಿಂಸಿಸಿದರು, ಅವರ ಮೇಲೆ ಆಕ್ರಮಣ ನಡೆಸಿದರು, ಅವಮಾನಕ್ಕೆ ಗುರಿಪಡಿಸಿದರು ಹಾಗೂ ಬೆದರಿಸಿದರು’’ ಎಂದು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News