ರಾಜಕೀಯ ಪ್ರಚಾರಕ್ಕೆ ಸಾರ್ವಜನಿಕ ಹಣ ಬಳಸುವಂತಿಲ್ಲ: ಚುನಾವಣಾ ಆಯೋಗ
ಹೊಸದಿಲ್ಲಿ, ಅ.8: ಯಾವುದೇ ಪಕ್ಷಕ್ಕೂ ತನ್ನ ರಾಜಕೀಯ ಚಿಹ್ನೆಯ ಪ್ರಚಾರಕ್ಕೆ ಸಾರ್ವಜನಿಕರ ಹಣ ಹಾಗೂ ಸರಕಾರಿ ಯಂತ್ರಾಂಗವನ್ನು ಬಳಸಲು ಅವಕಾಶ ನೀಡುವು ದಿಲ್ಲವೆಂದು ಚುನಾವಣಾ ಆಯೋಗವಿಂದು ಹೇಳಿದೆ. ಬಿಎಸ್ಪಿ ಆಡಳಿತದ ವೇಳೆ ಉತ್ತರಪ್ರದೇಶದಲ್ಲಿ ಆನೆಯ ಪ್ರತಿಮೆಗಳನ್ನು ಸ್ಥಾಪಿಸಿರುವ ಕುರಿತಾದ ನ್ಯಾಯಾಂಗ ಸಮರದ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ.
ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರ ಪ್ರತಿ ಸ್ಪರ್ಧಿಯಾಗಿರುವ ಮಾಯಾವತಿ, ಉತ್ತರ ಪ್ರದೇಶದಲ್ಲಿ ತನ್ನ ಆಡಳಿತವಿದ್ದ ವೇಳೆ, ತನ್ನದೇ ಗಾತ್ರದ ಸ್ವಂತ ಪ್ರತಿಮೆಗಳು, ದಲಿತ ನಾಯಕರ ಪ್ರತಿಮೆಗಳು ಹಾಗೂ ಬಿಎಸ್ಪಿಯ ಚಿಹ್ನೆಯಾಗಿರುವ ಆನೆಯ ಪ್ರತಿಮೆಗಳ ಸ್ಥಾಪನೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ವಿವಾದಕ್ಕೆ ಕಾರಣರಾಗಿದ್ದರು.
ಈ ವರ್ಷ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ವೇಳೆ ಆಳುವ ಎಡಿಎಂಕೆ ತನ್ನ ಪ್ರಚಾರಕ್ಕಾಗಿ ಸರಕಾರಿ ಮಿನಿಬಸ್‌ಗಳ ಮೇಲೆ ಪಕ್ಷದ ಚಿಹ್ನೆಯಾದ ‘ಎರಡು ಎಲೆ’ಯನ್ನು ಚಿತ್ರಿಸಿತ್ತೆಂದು ವಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.
ಭವಿಷ್ಯದಲ್ಲಿ ಇಂತಹದನ್ನು ಯಾವುದೇ ಪಕ್ಷವಾದರೂ ಮಾಡುವುದು ಪತ್ತೆಯಾದಲ್ಲಿ ಅದರ ಚುನಾವಣಾ ಚಿಹ್ನೆಯನ್ನು ನಿಷೇಧಿಸಲಾಗುವುದು ಎಂದು ಚುನಾವಣಾ ಆಯೋಗವು ಶುಕ್ರವಾರ ನಿರ್ದೇಶನ ನೀಡಿದೆ.
ಮಾಯಾವತಿಯಿಂದ ಪಕ್ಷದ ರಾಜಕೀಯ ಸಂಕೇತಗಳನ್ನು ತೆರವುಗೊಳಿಸುವಂತೆ ಸಲ್ಲಿಸಲಾಗಿದ್ದ ಮನವಿಯೊಂದಕ್ಕೆ ಉತ್ತರವಾಗಿ ನಿರ್ದೇಶಕವೊಂದನ್ನು ರೂಪಿಸುವಂತೆ ದಿಲ್ಲಿ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಿದ ಬಳಿಕ ಈ ಆದೇಶ ಹೊರಟಿದೆ.