ಇಂದು ತಮಿಳುನಾಡು ಬಿಜೆಪಿಯಿಂದ ಅಮಿತ್ ಶಾ ಭೇಟಿ: ತಮಿಳಿಸೈ ಸೌಂದರರಾಜನ್
ಚೆನ್ನೈ, ಅ.8: ಕಾವೇರಿ ನಿರ್ವಹಣ ಮಂಡಳಿ ರಚನೆಯ ವಿರುದ್ಧ ಕೇಂದ್ರ ಸರಕಾರದ ನಿಲುವಿನಿಂದ ಹಿನ್ನಡೆ ಅನುಭವಿಸಿರುವ ತಮಿಳುನಾಡಿನ ಬಿಜೆಪಿ ರಾಜ್ಯಘಟಕವು ಈ ವಿಷಯವಾಗಿ ನಾಳೆ ಪಕ್ಷಾಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಲಿದ್ದೇನೆಂದು ಇಂದು ತಿಳಿಸಿದೆ. ರಾಜ್ಯದಲ್ಲಿ ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳ ಪ್ರತಿಭಟನೆ ಮುಂದುವರಿದಿದೆ.
ಕಾವೇರಿ ವಿವಾದದ ಕುರಿತು ತಾವು ನಾಳೆ ಪಕ್ಷಾಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿ, ಕಾವೇರಿ ನಿರ್ವಹಣಾ ಮಂಡಳಿಯ(ಸಿಎಂಬಿ) ಕುರಿತಾಗಿ ತಮಿಳುನಾಡು ಬಿಜೆಪಿ ಘಟಕದ ಅಭಿಪ್ರಾಯವನ್ನು ಮನವರಿಕೆ ಮಾಡಲಿದ್ದೇವೆಂದು ಪಕ್ಷದ ರಾಜ್ಯಾಧ್ಯಕ್ಷ ತಮಿಳಿಸೈ ಸೌಂದರರಾಜನ್ ತಿಳಿಸಿದ್ದಾರೆ.
ಶಾರನ್ನು ಭೇಟಿಯಾಗಲು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಹಾಗೂ ರಾಜ್ಯಸಭಾ ಸದಸ್ಯ ಎಲ್. ಗಣೇಶನ್ ಸೇರಿದಂತೆ ಬಿಜೆಪಿ ನಾಯಕರ ನಿಯೋಗವೊಂದರ ನೇತೃತ್ವವನ್ನು ತಾನು ವಹಿಸಲಿದ್ದೇನೆಂದು ಅವರು ಹೇಳಿದ್ದಾರೆ.
ಸಂಸತ್ ಅನುಮೋದನೆ ಸಹಿತ ಮಂಡಳಿ ರಚನೆಯ ಪ್ರಕ್ರಿಯೆಯನ್ನು ವಿವರಿಸಿದ ತಮಿಳಿಸೈ, ಬಿಜೆಪಿ ಸದಾ ತಮಿಳುನಾಡಿನ ರೈತರ ಹಿತಾಸಕ್ತಿ ಕಾಪಾಡಿದೆ ಹಾಗೂ ಇನ್ನು ಮುಂದೆಯೂ ಕಾಪಾಡಲಿದೆ ಎಂದಿದ್ದಾರೆ.
ರಾಜ್ಯದ ಬಿಜೆಪಿ ಘಟಕವು ಸಿಎಂಬಿ ರಚನೆಯ ಪರವಾಗಿದೆ ಎಂದ ಅವರು, ಅದಕ್ಕಾಗಿ ಎಲ್ಲ ಕ್ರಮ ಕೈಗೊಳ್ಳಲಿದ್ದೇವೆಂದು ತಿಳಿಸಿದ್ದಾರೆ.