ಕೊಹ್ಲಿ -ರಹಾನೆ ಬೊಂಬಾಟ್ ಬ್ಯಾಟಿಂಗ್

Update: 2016-10-08 18:28 GMT

 ಇಂದೋರ್,ಅ.8: ನಾಲ್ಕನೆ ವಿಕೆಟ್‌ಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ದಾಖಲಿಸಿದ 167 ರನ್‌ಗಳ ಜೊತೆಯಾಟದ ನೆರವಿನಲ್ಲಿ ಇಲ್ಲಿ ಇಂದು ಆರಂಭಗೊಂಡ ನ್ಯೂಝಿಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಹೋಳ್ಕ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಟ ನಿಂತಾಗ ವಿರಾಟ ಕೊಹ್ಲಿ ಔಟಾಗದೆ 103 ರನ್ ಮತ್ತು ಅಜಿಂಕ್ಯ ರಹಾನೆ 79 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
  ವಿರಾಟ್ ಕೊಹ್ಲಿ 13ನೆ ಶತಕ ದಾಖಲಿಸಿದ್ದಾರೆ. ಕಳೆದ ಐದು ಟೆಸ್ಟ್‌ಗಳ 7 ಇನಿಂಗ್ಸ್‌ಗಳಲ್ಲಿ ಅವರಿಂದ ಒಂದು ಅರ್ಧಶತಕವೂ ಬಂದಿರಲಿಲ್ಲ. ಈ ಸರಣಿಯಲ್ಲಿ ಉಭಯ ತಂಡಗಳ ಯಾವನೇ ಒಬ್ಬ ಬ್ಯಾಟ್ಸ್‌ಮನ್‌ಈ ತನಕ ಶತಕ ದಾಖಲಿಸಿರಲಿಲ್ಲ. ಕೊಹ್ಲಿ ಅವರಿಂದ ಮೊದಲ ಶತಕ ದಾಖಲಾಗಿದೆ.
 18 ಸಾವಿರ ಪ್ರೇಕ್ಷಕರಿಂದ ತುಂಬಿದ್ದ ಹೋಲ್ಕರ್ ಕ್ರೀಡಾಂಗಣದಲ್ಲಿ ಮೊದಲು ಕೊಹ್ಲಿ ಮತ್ತು ರಹಾನೆ ಮುರಿಯದ ಜೊತೆಯಾಟ ನೀಡಿದರು.ಟೀ ವಿರಾಮದ ಮೊದಲು 20 ಓವರ್‌ಗಳಲ್ಲಿ 48 ರನ್ ಗಳಿಸಿದರು. ಬಳಿಕ 34 ಓವರ್‌ಗಳಲ್ಲಿ 119 ರನ್ ಜಮೆ ಮಾಡಿದರು.
 
ನ್ಯೂಝಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸನ್ ಅವರು ಐವರು ಬೌಲರ್‌ಗಳನ್ನು ದಾಳಿಗಿಳಿಸಿದ್ದರೂ, ಅವರ ಪ್ರಯತ್ನ ಫಲ ನೀಡಲಿಲ್ಲ. ಕಳೆದ ಏಳು ಟೆಸ್ಟ್ ಇನಿಂಗ್ಸ್‌ಗಳಲ್ಲಿ 44,3, 4,9, 18, 9 ಮತ್ತು 45 ರನ್ ದಾಖಲಿಸಿದ್ದ ಕೊಹ್ಲಿ ಅವರು ಇಂದು ಹೆನ್ರಿ ಅವರ 84.5ನೆ ಓವರ್‌ನಲ್ಲಿ 1 ರನ್ ಗಳಿಸುವ ಮೂಲಕ ಶತಕ ದಾಖಲಿಸಿದರು. 184 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 13ನೆ ಶತಕ ಪೂರ್ಣಗೊಳಿಸಿದರು.ಅಜಿಂಕ್ಯ ರಹಾನೆ 123 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಅರ್ಧಶತಕ ದಾಖಲಿಸಿದರು. ಗಂಭೀರ್ 29ರಲ್ಲಿ ಔಟ್
 ಎರಡು ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ಮರಳಿರುವ ದಿಲ್ಲಿಯ ಆರಂಭಿಕ ದಾಂಡಿಗ ಗೌತಮ್ ಗಂಭೀರ್ ಅವರು ನ್ಯೂಝಿಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭರವಸೆಯ ಸ್ಕೋರ್ ದಾಖಲಿಸುವಲ್ಲಿ ಎಡವಿದ್ದಾರೆ.
   ಗಾಯಾಳು ಶಿಖರ್ ಧವನ್ ಬದಲಿಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದ ಗಂಭೀರ್ 29 ರನ್ ಗಳಿಸಿ ಔಟಾಗಿದ್ದಾರೆ. ತಾನೆದುರಿಸಿದ ಐದನೆ ಎಸೆತದಲ್ಲಿ ಹೆನ್ರಿ ಓವರ್‌ನಲ್ಲಿ (1.5) ಬೌಂಡರಿ ಬಾರಿಸುವ ಮೂಲಕ ಖಾತೆ ತೆರೆದಿದ್ದ ಗಂಭೀರ್ ಅವರು ಹೆನ್ರಿ ಅವರ ಮುಂದಿನ ಓವರ್‌ನಲ್ಲಿ (3.3ಮತ್ತು 3.4) ಸತತ ಎರಡು ಸಿಕ್ಸರ್ ಸಿಡಿಸಿದ್ದರು. ಆದರೆ ಇದೇ ಬ್ಯಾಟಿಂಗ್ ಹೆಚ್ಚು ಹೊತ್ತು ಮುಂದುವರಿಯಲಿಲ್ಲ.
ಮುರಳಿ ವಿಜಯ್ ಜೊತೆ ಮೊದಲ ವಿಕೆಟ್‌ಗೆ 26 ರನ್‌ಗಳ ಜೊತೆಯಾಟ ನೀಡಿದರು. ಮುರಳಿ ವಿಜಯ್ 10 ರನ್ ಗಳಿಸಿ ಜೀತನ್ ಪಟೇಲ್ ಎಸೆತದಲ್ಲಿ ಲಥಾಮ್‌ಗೆ ಕ್ಯಾಚ್ ನೀಡಿದರು.
      
ಗಂಭೀರ್ ಎರಡನೆ ವಿಕೆಟ್‌ಗೆ ಚೇತೇಶ್ವರ ಪೂಜಾರ ಜೊತೆಗೆ 34 ರನ್‌ಗಳ ಜೊತೆಯಾಟ ನೀಡಿದರು. ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಎರಡನೆ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಮೂರನೆ ಟೆಸ್ಟ್‌ಗೆ ಮರಳಿರುವ ಅವರು ಐದನೆ ಓವರ್‌ನಲ್ಲೇ ಸ್ಪಿನ್ನರ್‌ಗಳನ್ನು ಇಳಿಸಿದರು. ಆದರೆ ಗಂಭೀರ್ ಅವರು ಮಿಚೆಲ್ ಸ್ಯಾಂಟ್ನೆರ್ ಎಸೆತದಲ್ಲಿ (5.3) ಮತ್ತು ಜೀತನ್ ಪಟೇಲ್ ಓವರ್ ನಲ್ಲಿ(6.4) ಬೌಂಡರಿ ಬಾರಿಸಿದರು. ಇದರೊಂದಿಗೆ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಮೂಲಕ 24 ರನ್‌ಗಳನ್ನು ಅವರು ದಾಖಲಿಸಿದ್ದರು. ಒಂದು ಹಂತದಲ್ಲಿ 27 ಎಸೆತಗಳಲ್ಲಿ 27 ರನ್ ಗಳಿಸಿದ್ದ ಗಂಭೀರ್ ಅವರ ಬ್ಯಾಟಿಂಗ್ ನಿಧಾನಗೊಂಡಿತು. ಮುಂದೆ 2 ರನ್‌ಗಳಿಗಾಗಿ 25 ಎಸೆತಗಳನ್ನು ತೆಗೆದುಕೊಂಡರು. ಟ್ರೆಂಟ್ ಬೌಲ್ಟ್ ಅವರ 19.5ನೆ ಓವರ್‌ನಲ್ಲಿ ಚೆಂಡು ಅವರ ಬ್ಯಾಟ್‌ನ್ನು ವಂಚಿಸಿ ಪ್ಯಾಡ್‌ಗೆ ಬಡಿಯಿತು. ಇದರಿಂದಾಗಿ ಗಂಭೀರ್ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಭಾರತದ ಆರಂಭಿಕ ದಾಂಡಿಗರಿಬ್ಬರು ಬೇಗನೆ ಔಟಾದರು.
ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು.
,,,,,,,,
ಅರ್ಧಶತಕ ವಂಚಿತ ಚೇತೇಶ್ವರ ಪೂಜಾರ
    ಚೇತೇಶ್ವರ ಪೂಜಾರ ಅವರು ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಮೂರು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಆದರ ಅಂತಿಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅವರಿಂದ ಅರ್ಧಶತಕ ಬರಲಿಲ್ಲ. ಕೇವಲ 41 ರನ್(108ಎ, 6 ಬೌ) ಗಳಿಸಿ ಸ್ಯಾಂಟ್ನೆರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಕಾನ್ಪುರದಲ್ಲಿ ಮೊದಲ ಟೆಸ್ಟ್‌ನಲ್ಲಿ ಅವಳಿ ಅರ್ಧಶತಕಗಳು ದಾಖಲಾಗಿತ್ತು. ಎರಡನೆ ಟೆಸ್ಟ್‌ನಲ್ಲಿ ಅವರು ಶತಕದ ನಿರೀಕ್ಷೆ ಮೂಡಿಸಿದ್ದರೂ, 87ರನ್ ಗಳಿಸಿ ಔಟಾಗಿದ್ದರು. ಅವರು ಶತಕ ಗಳಿಸಿ ವರ್ಷ ಉರುಳಿವೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಔಟಾಗದೆ 145 ರನ್ ದಾಖಲಿಸಿದ್ದರು. ಭಾರತದ ಪರ ಈ ಸರಣಿಯಲ್ಲಿ ಕೊಹ್ಲಿ ಮೂಲಕ ಮೊದಲ ಶತಕ ದಾಖಲಾಗಿದೆ. ಅಜಿಂಕ್ಯ ರಹಾನೆ ಶತಕದ ಹಾದಿಯಲ್ಲಿದ್ದಾರೆ.
ನ್ಯೂಝಿಲೆಂಡ್‌ನ ಟ್ರೆಂಟ್ ಬೌಲ್ಟ್, ಜೀತನ್ ಪಟೇಲ್, ಸ್ಯಾಂಟ್ನೆರ್ ತಲಾ ಒಂದು ವಿಕೆಟ್ ಎಗರಿಸಿದ್ದಾರೆ.
,,,,,,,,,,,
ಅಂಕಿ-ಅಂಶ

*3: ಭಾರತದ ಮೂವರು ನಾಯಕರು ಕೊಹ್ಲಿಗಿಂತ ಹೆಚ್ಚು ಶತಕ ದಾಖಲಿಸಿದ್ದಾರೆ. 2015 ಜನವರಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಕೊಹ್ಲಿ ನಾಯಕರಾಗಿ 6ನೆ ಶತಕ ದಾಖಲಿಸಿದ್ದಾರೆ. ಮಾಜಿನಾಯಕರಾದ ಸುನೀಲ್ ಗವಾಸ್ಕರ್(11), ಮುಹಮ್ಮದ್ ಅಝರುದ್ದೀನ್(9) ಮತ್ತು ಸಚಿನ್ ತೆಂಡುಲ್ಕರ್(7) ಕೊಹ್ಲಿಗಿಂತ ಹೆಚ್ಚು ಶತಕ ದಾಖಲಿಸಿದ್ದಾರೆ. 17: ವಿರಾಟ್ ಕೊಹ್ಲಿ ತವರಿನಲ್ಲಿ ಈ ಮೊದಲು 17 ಇನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿರಲಿಲ್ಲ. ಅವರು 2013 ಫೆಬ್ರವರಿಯಲ್ಲಿ ಚಿಪಾಕ್ ಸ್ಟೇಡಿಯಂನಲ್ಲಿ ಕೊನೆಯ ಬಾರಿ ಶತಕ ದಾಖಲಿಸಿದ್ದರು.
*2003: ನ್ಯೂಝಿಲೆಂಡ್ ವಿರುದ್ಧ ಸೌರವ್ ಗಂಗುಲಿ ಅವರು ಭಾರತದ ಪರ ಈ ಹಿಂದೆ ಶತಕ ದಾಖಲಿಸಿದ್ದ ಕೊನೆಯ ನಾಯಕರಾಗಿದ್ದರು. ಅವರು 2003ರಲ್ಲಿ ಅಹ್ಮದಾಬಾದ್‌ನಲ್ಲಿ ಔಟಾಗದೆ 100 ರನ್ ಗಳಿಸಿದ್ದರು.
*49: ಅಜಿಂಕ್ಯ ರಹಾನೆ 49ನೆ ಇನಿಂಗ್ಸ್‌ನಲ್ಲಿ 2000 ರನ್ ಪೂರ್ಣಗೊಳಿಸಿದ್ದಾರೆ.
*13: 27ರ ಹರೆಯದ ಕೊಹ್ಲಿ ಅವರು 48ನೆ ಟೆಸ್ಟ್‌ನ 81ನೆ ಇನಿಂಗ್ಸ್‌ನಲ್ಲಿ 13ನೆ ಶತಕ ದಾಖಲಿಸಿದರು.
*10: 28ರ ಹರೆಯದ ಅಜಿಂಕ್ಯ ರಹಾನೆ 29ನೆ ಟೆಸ್ಟ್‌ನ 49ನೆ ಇನಿಂಗ್ಸ್‌ನಲ್ಲಿ 10ನೆ ಅರ್ಧಶತಕ ದಾಖಲಿಸಿದ್ದಾರೆ.
,,,,,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News