ಸಾಮಾಜಿಕ ನ್ಯಾಯ ನೀಡಲು ಸರಕಾರ ಬದ್ಧ :ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2016-10-09 14:34 GMT

ಮಂಗಳೂರು, ಅ.8:  ಸರಕಾರಕ್ಕೆ ಕೋಮುವಾದದಲ್ಲಿ ನಂಬಿಕೆಯಿಲ್ಲ. ಸಾಮಾಜಿಕ ನ್ಯಾಯ ನೀಡಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಪುತ್ತೂರು ತಾಲೂಕಿನ ಕೊಯ್ಲದಲ್ಲಿ ನೂತನ ಪಶುವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸಾಮಾಜಿಕ ನ್ಯಾಯ ಕೊಡಲು ಭಾಷಣದ ಮುಖಾಂತರ ಮಾತ್ರ ಸಾಧ್ಯವಿಲ್ಲ. ಕಾರ್ಯಕ್ರಮದ ಮುಖಾಂತರ ಜನರನ್ನು ತಲುಪಬೇಕಾಗಿದೆ. ರಾಜ್ಯದಲ್ಲಿ ಕೋಮುವಾದವನ್ನು ಯಾರು ಮಾಡಿದರು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಂವಿಧಾನದಲ್ಲಿ ಜಾತ್ಯತೀತ ರಾಷ್ಟ್ರ ಕಟ್ಟುತ್ತೇವೆ ಎಂದು ಒಪ್ಪಿಕೊಂಡಿದ್ದೇವೆ. ಆ ಮೂಲಕ ರಾಜ್ಯದಲ್ಲಿ ಕೋಮುಸಾಮರಸ್ಯದ ವಾತಾವರಣ ನಿರ್ಮಾಣ ಮಾಡಲು ಸರ್ಕಾರ ಬದ್ದವಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ 650 ಪಶುವೈದ್ಯರನ್ನು ನೇಮಕ ಮಾಡಲಾಗಿದ್ದು, ಇನ್ನೂ 692 ಪಶು ವೈದ್ಯರ ಮತ್ತು 1300 ಸಹಾಯಕ ನಿರ್ದೇಶಕರುಗಳ ಹುದ್ದೆ ಖಾಲಿಯಾಗಿದೆ. ಪಶುಸಂಗೋಪನಾ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಶ್ವವಿದ್ಯಾನಿಲಯ ಬೀದರ್, ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಕೊಯ್ಲದಲ್ಲಿ ಭಾನುವಾರ ನೂತನ ಪಶು ವೈದ್ಯಕೀಯ ಮಹಾವಿದ್ಯಾಲಯದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಇಲಾಖೆಯಲ್ಲಿನ ಹುದ್ದೆಗಳನ್ನು ಭರ್ತಿಗೊಳಿಸುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯ ಕಾನೂನು ಸಡಿಲಗೊಳಿಸಲಾಗಿದೆ. ಇದರಿಂದಾಗಿ ಶೀಘ್ರದಲ್ಲಿಯೇ ಎಲ್ಲಾ ಹುದ್ದೆಗಳು ಭರ್ತಿಯಾಗಲಿದೆ ಎಂದರು.

ಕೊಯ್ಲದಲ್ಲಿ 895 ಎಕ್ರೆ ಜಮೀನು ಇದ್ದು ಇದಲ್ಲಿ 247 ಎಕ್ರೆ ಜಮೀನಿನಲ್ಲಿ ಪ್ರಸ್ತಾವಿತ ಪಶು ವೈದ್ಯಕೀಯ ಕಾಲೇಜು, ಪಶುವೈದ್ಯಕೀಯ ಆಸ್ಪತ್ರೆ, ವಿದ್ಯಾರ್ಥಿನಿಲಯ ಹಾಗೂ ಫಾರಂ ನಿರ್ಮಿಸಲಾಗುವುದು. ಇದಕ್ಕಾಗಿ ರೂ. 142 ಕೋಟಿ ಮಂಜೂರುಗೊಳಿಸಲಾಗಿದೆ. ಪ್ರಥಮ ಹಂತದಲ್ಲಿ ರೂ. 110.5 ಕೋಟಿಯ ಕಾಮಗಾರಿ ನಡೆಯಲಿದೆ. ಇಲ್ಲಿ 60 ವಿದ್ಯಾರ್ಥಿಗಳಿಗೆ ಕಲಿಗೆ ಅವಕಾಶವಾಗಲಿದೆ ಎಂದ ಅವರು ಇದರೊಂದಿಗೆ ಗದಗ ಮತ್ತು ಅಥಣಿ ಜಿಲ್ಲೆಗಳಲ್ಲಿಯೂ ಪಶು ವೈದ್ಯಕೀಯ ಕಾಲೇಜ್ ನಿರ್ಮಾಣವಾಗಲಿದೆ. ಜಾನುವಾರು ನಮ್ಮ ಸಂಪತ್ತು ಆಗಿದ್ದು, ಅದನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಇಲ್ಲಿ ಸಾಂಪದ್ರಾಯಿಕ ತಳಿಗಳ ಜೊತೆಗೆ ಹಾಲಿನ ಉತ್ಪಾಧನೆ ಹೆಚ್ಚಳ ಕುರಿತು ಅಭಿವೃದ್ದಿ ಪಡಿಸಲಾಗುವುದು ಎಂದರು. ಮನುಷ್ಯರು ಮತ್ತು ಪ್ರಾಣಿಗಳು ಇವೆರಡೂ ದೇಶದ ಸಂಪತ್ತಾಗಿದೆ. ಇವೆರಡರ ಆರೋಗ್ಯವೂ ಮುಖ್ಯವಾಗಿದೆ ಆರೋಗ್ಯವಂತ ಮನುಷ್ಯರು ಮತ್ತು ಜಾನುವಾರುಗಳ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ಸರ್ಕಾರ ಹೈನುಗಾರಿಕೆ ನಡೆಸುತ್ತಿರುವ ರೈತರ ಪರವಾಗಿದ್ದು, ಇದೀಗ ಪ್ರತಿದಿನ 75 ಲಕ್ಷ ಲೀಟರ್ ಹಾಲು ಉತ್ಪಾಧನೆಯಾಗುತ್ತಿದೆ. ಈ ಎಲ್ಲಾ ಉತ್ಪಾಧನೆಗಳಿಗೆ ತಲಾ ರೂ. 4ರಂತೆ ಸಬ್ಸಿಡಿ ನೀಡಲಾಗುತ್ತಿದ್ದು ಇದರಿಂದಾಗಿ ಪ್ರತಿವರ್ಷ ರೂ. 1ಸಾವಿರ ಕೋಟಿ ರೂಪಾಯಿ ಹಳ್ಳಿಯ ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ.

ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಸರ್ಕಾರವು ರಾಜ್ಯದ ಎಲ್ಲಾ ವರ್ಗದ ಜನರನ್ನು ತಲುಪುವ ಪ್ರಯತ್ನ ನಡೆಸುತ್ತಿದ್ದು, ರಾಜ್ಯದ 6.5 ಕೋಟಿ ಜನರಲ್ಲಿ 4.5 ಕೋಟಿ ಜನರು ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳಾಗಿದ್ದಾರೆ. ಸರ್ಕಾರವು ಹಸಿವು ಮುಕ್ತ ರಾಜ್ಯದ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಬಡವರಿಗೆ ಉಚಿತ ಅಕ್ಕಿ ಮತ್ತು ಗೋದಿಯನ್ನು ವಿತರಣೆ ಮಾಡುತ್ತಿದೆ. ಮುಂದಿನ ವರ್ಷದಲ್ಲಿ ಅರ್ಹರೆಲ್ಲರಿಗೂ ಬಿಪಿಎಲ್ ಕಾರ್ಡ್ ದೊರಕಿದಾಗ ಮಾತ್ರ ಈ ಯೋಜನೆ ಸಫಲವಾಗಲು ಸಾದ್ಯ. ಹಸಿವು ಮುಕ್ತಗೊಳಿಸಲೆಂದು ಮುಂದಿನ ವರ್ಷಗಳಿಂದ ಕ್ಷೀರ ಭಾಗ್ಯ ಯೋಜನೆಯನ್ನು 3ರಿಂದ 5 ದಿನಕ್ಕೆ ವಿಸ್ತರಣೆ ಹಾಗೂ ಪಡಿತರ ಅಕ್ಕಿ ಮತ್ತು ಗೋಧಿಯನ್ನು 3 ಕಿಲೋದಿಂದ 5 ಕಿಲೋಗೆ ಹೆಚ್ಚು ಮಾಡಲಾಗುವುದು. ಆರೋಗ್ಯ ಸುಧಾರಣೆ ಮತ್ತು ಅಪೌಷ್ಟಿಕತೆ ತಡೆಯುವ ದಿಕ್ಕಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದರು.

ಮುಂದಿನ ಹಂತದಲ್ಲಿ ಕಡಬ ತಾಲೂಕು ಘೋಷಣೆ:

ರಾಜ್ಯದಲ್ಲಿ 43 ಹೊಸ ತಾಲೂಕು ರಚನೆ ಯೋಜನೆ ಸರ್ಕಾರದ ಮುಂದಿದ್ದು, ಈ ಭಾಗದ ಜನರ ಬೇಡಿಕೆಯಾಗಿರುವ ಕಡಬ ತಾಲೂಕು ರಚನೆಗೆ ಮುಂದಿನ ಘೋಷಣೆ ಸಂದರ್ಭದಲ್ಲಿ ಆದ್ಯತೆ ನೀಡಲಾಗುವುದು. ಅಲ್ಲದೆ ಕಡಬಕ್ಕೆ ನೂತನ ಪದವಿ ಕಾಲೇಜು ಮಂಜೂರುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ 165 ಯೋಜನೆಗಳಲ್ಲಿ 125ಕ್ಕೂ ಅಧಿಕ ಪೂರೈಸಿದ್ದು, ಮುಂದಿನ 2 ವರ್ಷಗಳಲ್ಲಿ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು. ಸರ್ಕಾರದ ಕೃಷಿ ಭಾಗ್ಯ, ವಿದ್ಯಾಸಿರಿ ಯೋಜನೆ, ಪಶು ಭಾಗ್ಯ ಇನ್ನಿತರ ಯೋಜನೆಗಳು ಜನರ ಆರ್ಥಿಕ ಸಬಲೀಕರಣಕ್ಕೆ ದಾರಿಯಾಗಿದೆ ಎಂದರು.

ಕೋಮುವಾದವನ್ನು ಯಾವುದೇ ಧರ್ಮದವರು ಮಾಡಿದರೂ ಅದರಿಂದ ಸಮಾಜಕ್ಕೆ ತೊಂದರೆಯಾಗಲಿದೆ. ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಬೇಕು ವಿನಹ ಕೋಮುವಾದದಿಂದಲ್ಲ, ಎಲ್ಲಾ ಜಾತಿ ಧರ್ಮದ ಜನರು ಒಂದು ತಾಯಿಯ ಮಕ್ಕಳಂತೆ ಬದುಕುವ ವಾತಾವರಣ ನಿರ್ಮಿಸುವುದು ರಾಜ್ಯ ಸರ್ಕಾರದ ನಿಲುವು. ಈ ದಿಕ್ಕಿನಲ್ಲಿ ಎಲ್ಲರೂ ಪ್ರಯತ್ನ ನಡೆಸಬೇಕು ಎಂದರು. ಬಹುದಿನಗಳ ಬೇಡಿಕೆ ಈಡೇರಿದೆ- ಶಾಸಕ ಅಂಗಾರ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಅಂಗಾರ ಮಾತನಾಡಿ ತನ್ನ ಕ್ಷೇತ್ರದ ಬಹುಕಾಲದ ಬೇಡಿಕೆಯೊಂದು ಇದೀಗ ಈಡೇರಿದೆ. ಒಳ್ಳೆಯ ಕೆಲಸ ಯಾರು ಮಾಡಿದರೂ ಅದನ್ನು ಗೌರವಿಸುವ ಮನೋಸ್ಥಿತಿಯಿರಬೇಕು. ಇಲ್ಲದಿದ್ದಲ್ಲಿ ನಮ್ಮ ವ್ಯಕ್ತಿತ್ವ ಕುಂಟಿತವಾಗುತ್ತದೆ. ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಪ್ರಸ್ತಾಪಿತ ಕಡಬ ತಾಲೂಕು ರಚನೆ ಹಾಗೂ ಕುಮಾರದಾರಾ ನದಿಯಿಂದ ಕೊಯ್ಲ ಮತ್ತು ರಾಮಕುಂಜ ಗ್ರಾಮಕ್ಕೆ ಕುಡಿಯುವ ನೀರಿಯ ಭ್ರಹತ್ ಕುಡಿಯುವ ನೀರಿನ ಯೋಜನೆ ಪೂರ್ಣವಾಗುವಲ್ಲಿ ಮುಖ್ಯಮಂತ್ರಿಗಳು ಪ್ರಯತ್ನಿಸಬೇಕು ಎಂದರು. ಸಚಿವರಾದ ರಮಾನಾಥ ರೈ, ಬಿ. ಮಂಜು, ಯು.ಟಿ.ಖಾದರ್, ಸಚೇತಕ ಐವನ್ ಡಿ’ಸೋಜ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಶಕುಂತಳಾ ಶೆಟ್ಟಿ, ಅಭಯಚಂದ್ರ, ಮೊಯಿದ್ದೀನ್ ಬಾವಾ, ಪ್ರತಾಪ್ ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News