ಮಾಧ್ಯಮಗಳು ಕೋಮುವಾದವನ್ನು ವೈಭವೀಕರಿಸದೆ ಅದನ್ನು ಖಂಡಿಸಿ ಬರೆದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ:ಸಿಎಂ

Update: 2016-10-09 14:57 GMT

ಬಂಟ್ವಾಳ, ಅ. 9: ಮಾಧ್ಯಮಗಳು ಕೋಮುವಾದವನ್ನು ವೈಭವೀಕರಿಸದೆ ಅದನ್ನು ಖಂಡಿಸಿ ಬರೆದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಿ.ಸಿ.ರೋಡ್ ’ಜೋಡುಮಾರ್ಗ ಉದ್ಯಾನವನ’ ಉದ್ಘಾಟನೆಗೆಂದು ರವಿವಾರ ಬಂಟ್ವಾಳಕ್ಕೆ ಆಗಮಿಸಿದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋಮುವಾದವು ಇಡೀ ದೇಶ ಅಪಾಯಕಾರಿಯಾಗಿದ್ದು ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಉಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೋಮುವಾದವನ್ನು ಮಾಧ್ಯಮಗಳು ವೈಭವೀಕರಿಸದೆ ಅದನ್ನು ಖಂಡಿಸಿ ವರದಿ ಮಾಡಬೇಕಾಗಿದೆ ಎಂದರು.

ಮಂಗಳೂರು ಮಹಾ ನಗರ ಪಾಲಿಕೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಡ್ಯಾಂನಿಂದಾಗಿ ಮುಳುಗಡೆಯಾಗುವ ಪ್ರದೇಶದ ಸರ್ವೇ ಕಾರ್ಯ ಮುಗಿದ ಬಳಿಕ ಸಂತ್ರಸ್ಥರಿಗೆ ಸೂಕ್ತ ರೀತಿಯ ಪರಿಹಾರ ನೀಡಲಾಗುವುದು ಎಂದು ಪ್ರೆಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಡ್ಯಾಂನ ಕುರಿತಾಗಿ ಪಕ್ಕದಲ್ಲೇ ಇದ್ದ ಸಚಿವ ರಮಾನಾಥ ರೈರವರಲ್ಲಿ ಮಾಹಿತಿ ಕೇಳಿದಾಗ, ಹಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಈ ತುಂಬೆ ಹೊಸ ಡ್ಯಾಂನ ಕಾಮಗಾರಿಗೆ ತಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವೇಗ ನೀಡಲಾಗಿದೆ ಎಂದು ಸಚಿವ ರಮಾನಾಥ ರೈ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದರು.

ಇದೇ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹರಿನಾಥ್ ನೇತೃತ್ವದ ಕಾರ್ಪೊರೇಟರ್‌ಗಳ ನಿಯೋಗ ಮುಖ್ಯಮಂತ್ರಿಯನ್ನು ಭೇಟಿಯಾಗಿ ತುಂಬೆ ಹೊಸ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗುವ ಸಂತ್ರಸ್ತರಿಗೆ ಪರಿಹಾರ ನೀಡಲು ಅನುದಾನ ಮಂಜೂರುಗೊಳಿಸುವಂತೆ ಮನವಿ ಸಲ್ಲಿಸಿದರು.

ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ: ಕರಾವಳಿ ಜಿಲ್ಲೆಯಲ್ಲಿ ಉಂಟಾಗಿರುವ ಮರಳು ಸಮಸ್ಯೆ ನಿವಾರಣೆಗಾಗಿ ಸಮಿತಿಯೊಂದನ್ನು ರಚಿಸಿ ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗುವುದು ಎಂದ ಮುಖ್ಯಮಂತ್ರಿಯವರು ನೇತ್ರಾವತಿ ತಿರುವು ಯೋಜನೆಯ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಯಲು ಸೀಮೆಗೆ ನೀರು ಪೂರೈಸುವ ಈ ಯೋಜನೆ ನೇತ್ರಾವತಿ ತಿರುವಲ್ಲ ಎಂದು ಸ್ಪಷ್ಟಪಡಿಸಿದರು.

ಮಳೆಗಾಲದಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಪಂಪ್ ಮಾಡಿ ಬಯಲು ಸೀಮೆಗೆ ಕುಡಿಯಲು ಪೂರೈಸುವುದೇ ಈ ಯೋಜನೆಯ ಉದ್ದೇಶ ಎಂದ ಮುಖ್ಯಮಂತ್ರಿಯವರು ನದಿಯೊಂದನ್ನು ತಿರುಗಿಸಲು ಸಾಧ್ಯವೇ? ಈ ಯೋಜನೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಇದ್ದು ಇದನ್ನು ಹೋಗಲಾಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಚಿವ ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಐವನ್ ಡಿಸೋಜ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿತುನ್ ರೈ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಪಂನ ಕಾಂಗ್ರೆಸ್ ಸದಸ್ಯರು ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಬಳಿಕ ಮುಖ್ಯಮಂತ್ರಿ ಭೋಜನ ಸವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News