×
Ad

ರಣಜಿ ಟ್ರೋಫಿ: ದಿಲ್ಲಿ, ಮಧ್ಯಪ್ರದೇಶಕ್ಕೆ ಭರ್ಜರಿ ಜಯ

Update: 2016-10-09 23:01 IST

 ಹೈದರಾಬಾದ್, ಅ.9: ರಣಜಿ ಟ್ರೋಫಿ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳು ರವಿವಾರ ಇಲ್ಲಿ ಕೊನೆಗೊಂಡಿದ್ದು ದಿಲ್ಲಿ, ಮಧ್ಯಪ್ರದೇಶ, ಜಾರ್ಖಂಡ್ ಹಾಗೂ ಹೈದರಾಬಾದ್ ತಂಡಗಳು ಜಯ ಸಾಧಿಸಿವೆ.

ವಡೋದರದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ದಿಲ್ಲಿ ತಂಡ ಅಸ್ಸಾಂ ತಂಡದ ವಿರುದ್ಧ ಇನಿಂಗ್ಸ್ ಹಾಗೂ 83 ರನ್‌ಗಳ ಅಂತರದಿಂದಲೂ, ದಿಲ್ಲಿಯಲ್ಲಿ ನಡೆದ ‘ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಮಹಾರಾಷ್ಟ್ರದ ವಿರುದ್ಧ ಜಾರ್ಖಂಡ್ ತಂಡ 6 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿ ಶುಭಾರಂಭ ಮಾಡಿದವು.

 ನಾಗ್ಪುರದಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ತಂಡ ಗೋವಾದ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದರೆ, ಮತ್ತೊಂದು ಎ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ ಮಧ್ಯಪ್ರದೇಶ ಇನಿಂಗ್ಸ್ ಹಾಗೂ 64 ರನ್‌ಗಳ ಅಂತರದಿಂದ ಜಯ ಸಾಧಿಸಿತು.

ನಾಲ್ಕನೆ ಹಾಗೂ ಕೊನೆಯ ದಿನವಾದ ರವಿವಾರ ನಡೆದ ಇನ್ನುಳಿದ 7 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ. ಹಿಮಾಚಲ ಪ್ರದೇಶ-ಆಂಧ್ರ, ಬರೋಡಾ-ಗುಜರಾತ್, ಸರ್ವಿಸಸ್-ಹರ್ಯಾಣ, ಕೇರಳ-ಜಮ್ಮು-ಕಾಶ್ಮೀರ, ಒಡಿಶಾ-ವಿದರ್ಭ, ರೈಲ್ವೇಸ್-ಪಂಜಾಬ್ ಹಾಗೂ ಸೌರಾಷ್ಟ್ರ-ರಾಜಸ್ಥಾನ ನಡುವಿನ ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.

ದಿಲ್ಲಿಗೆ ಭರ್ಜರಿ ಗೆಲುವು ತಂದುಕೊಟ್ಟ ಮನನ್ ಶರ್ಮ

ವಡೋದರ, ಅ.9: ಐದು ವಿಕೆಟ್ ಗೊಂಚಲು ಕಬಳಿಸಿದ ಎಡಗೈ ಸ್ಪಿನ್ನರ್ ಮನನ್ ಶರ್ಮ ದಿಲ್ಲಿ ತಂಡ ಅಸ್ಸಾಂನ ವಿರುದ್ಧ ಇನಿಂಗ್ಸ್ ಹಾಗೂ 83 ರನ್‌ಗಳ ಭರ್ಜರಿ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು.

ಅಸ್ಸಾಂನ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪ್ರತಿರೋಧದ ನಡುವೆಯೂ ಜಯ ಸಾಧಿಸಿದ ದಿಲ್ಲಿ ಏಳಂಕವನ್ನು ಬಾಚಿಕೊಂಡಿತು. 296 ರನ್ ಹಿನ್ನಡೆಯೊಂದಿಗೆ 3 ವಿಕೆಟ್ ನಷ್ಟಕ್ಕೆ 100 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಅಸ್ಸಾಂ ಕೊನೆಯ ದಿನದಾಟವಾದ ರವಿವಾರ ಇನ್ನೂ 213 ರನ್ ಗಳಿಸಿ 313 ರನ್‌ಗೆ ಆಲೌಟಾಯಿತು.

  ಅಸ್ಸಾಂ 121 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆಸರೆಯಾದ ಸೈಯದ್ ಮುಹಮಮ್ದ್(82) ಹಾಗೂ ತರ್ಜಿಂದರ್ ಸಿಂಗ್(42)6ನೆ ವಿಕೆಟ್‌ಗೆ8 ರನ್ ಸೇರಿಸಿದರು. ಸ್ವರೂಪಮ್(47) ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಮಾನ್ ಶರ್ಮ ಹಾಗೂ ಪ್ರದೀಪ್ ಸಾಂಗ್ವಾನ್ ಈ ಎರಡು ಜೊತೆಯಾಟವನ್ನು ಮುರಿದರು. ಮಾನ್(5-108) ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5ನೆ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ಸಾಂಗ್ವಾನ್ ಹಾಗೂ ವರುಣ್ ಸೂಡ್ ತಲಾ 2 ವಿಕೆಟ್ ಪಡೆದರು.

ಮಹಾರಾಷ್ಟ್ರವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದ ಜಾರ್ಖಂಡ್ ತಂಡ ಆರು ಅಂಕ ಗಳಿಸಿತು. ಕೊನೆಯ ದಿನದಾಟದಲ್ಲಿ ಜಾರ್ಖಂಡ್ ಗೆಲುವಿಗೆ 37 ರನ್ ಅಗತ್ಯವಿತ್ತು. ವಿರಾಟ್ ಸಿಂಗ್ ಹಾಗೂ ಆನಂದ್ ಸಿಂಗ್ 6.5 ಓವರ್‌ಗಳಲ್ಲಿ 93 ರನ್ ಗುರಿಯನ್ನು ಬೆನ್ನಟ್ಟಿದರು. ಈ ಜೋಡಿ 5ನೆ ವಿಕೆಟ್‌ಗೆ ಅಜೇಯ 48 ರನ್ ಗಳಿಸಿತ್ತು.

ಹೈದರಾಬಾದ್‌ನಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ 465 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್‌ನಲ್ಲಿ 176 ರನ್ ಗಳಿಸಿದ್ದ ಉತ್ತರ ಪ್ರದೇಶ ಫಾಲೋ-ಆನ್‌ಗೆ ಸಿಲುಕಿತ್ತು.

ಕೊನೆಯ ದಿನದಾಟದಲ್ಲಿ 2ನೆ ಇನಿಂಗ್ಸ್‌ನಲ್ಲಿ 255 ರನ್‌ಗೆ ಆಲೌಟಾಗಿರುವ ಉ.ಪ್ರದೇಶ ಇನಿಂಗ್ಸ್ ಹಾಗೂ 64 ರನ್‌ಗಳ ಅಂತರದಿಂದ ಸೋತಿತ್ತು.

ನಾಗ್ಪುರದಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ತಂಡ 9 ವಿಕೆಟ್‌ಗಳ ಜಯ ಗಳಿಸಿತು. ಇಂದು 5 ರನ್‌ನಿಂದ 2ನೆ ಇನಿಂಗ್ಸ್ ಆರಂಭಿಸಿದ ಗೋವಾ ತಂಡ 255 ರನ್‌ಗೆ ಆಲೌಟಾಗಿ ಹೈದರಾಬಾದ್‌ಗೆ ಕೇವಲ 35 ರನ್ ಗುರಿ ನೀಡಿತು. ಹೈದರಾಬಾದ್ 1 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News