ಜಾತ್ಯತೀತತೆ ಇಲ್ಲದೆ ಪ್ರಜಾಪ್ರಭುತ್ವ ಅಸಾಧ್ಯ: ಜೆಎನ್‌ಯು ಪ್ರಾಧ್ಯಾಪಕ ಪ್ರೊ.ಆದಿತ್ಯ ಮುಖರ್ಜಿ ಅಭಿಮತ

Update: 2016-10-11 11:08 GMT

ಮಂಗಳೂರು, ಅ.11: ಜಾತ್ಯತೀತತೆ ಇಲ್ಲದೆ ಪ್ರಜಾಪ್ರಭುತ್ವವಿಲ್ಲ. ಅದೇ ರೀತಿ ಪ್ರಜಾಪ್ರಭುತ್ವ ಇಲ್ಲದೆ ಜಾತ್ಯತೀತೆಯೂ ಅಸಾಧ್ಯ. ಇವೆರಡೂ ಒದಕ್ಕೊಂದು ಪರಸ್ಪರ ಬೆಸೆದುಕೊಂಡಿದ್ದು, ಒಂದರ ಹೊರತು ಇನ್ನೊಂದು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಆದಿತ್ಯ ಮುಖರ್ಜಿ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರಕಲಾ ಭವನದಲ್ಲಿ ಬಿ.ವಿ.ಕಕ್ಕಿಲ್ಲಾಯ ಪ್ರತಿಷ್ಠಾನ, ಸಮದರ್ಶಿ ಪ್ರತಿಷ್ಠಾನ, ಹೊಸತು ಪತ್ರಿಕೆ, ಎಂ.ಎಸ್.ಕೃಷ್ಣನ್ ಪ್ರತಿಷ್ಠಾನ ಮತ್ತು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ನೀಡಿದರು.

‘ಭಾರತದ ಪರಿಕಲ್ಪನೆ: ದೂರದೃಷ್ಟಿ ಮತ್ತು ಸವಾಲುಗಳು’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ದೇಶದಲ್ಲಿಂದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತೆಯನ್ನು ಬೇರ್ಪಡಿಸುವ ಕುತಂತ್ರ ನಡೆಯುತ್ತಿದೆ ಎಂದರು. ಹಿಂದೂ ಎಂಬ ಪದ ರೂಪುಗೊಳ್ಳುವ ಮುನ್ನವೇ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಭಾರತದಲ್ಲಿತ್ತು. ಭಾರತವು ಜಾತ್ಯತೀತತೆ, ಏಕತೆ, ಸಹಬಾಳ್ವೆ ಮತ್ತು ಸಹಿಷ್ಣುತೆಯ ನೆಲೆಯಾಗಿರುವುದಕ್ಕೆ ಇತಿಹಾಸವೇ ಸಾಕ್ಷ ನುಡಿಯುತ್ತದೆ. ಪ್ರಸ್ತುತ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಬೆಂಬಲಿಸುವ ಸಂಘಟನೆಯಿಂದ ಬಂದವರು ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಸ್ವಾತಂತ್ರದ ಸಂದರ್ಭದಲ್ಲೂ ಆರೆಸ್ಸೆಸ್ ಹಿಂಸಾಚಾರದ ಮೂಲಕ ರಾಜಕೀಯ ಚುಕ್ಕಾಣಿಗೆ ಹಂಬಲಿಸಿತ್ತು. ಅದರಿಂದಾಗಿಯೇ ಅಹಿಂಸೆಯ ಹಾದಿಯಲ್ಲಿ ಸ್ವಾತಂತ್ರ ಚಳವಳಿಯಲ್ಲಿ ತೊಡಗಿಕೊಂಡಿದ್ದ ಮಹಾತ್ಮಾ ಗಾಂಧೀಜಿ ಅವರಿಗೆ ಅಪಥ್ಯವಾಗಿದ್ದರು. ಅಹಿಂಸೆಯಿಂದಲೇ ಸ್ವಾತಂತ್ರ ದೊರಕಿದ ಬಳಿಕವಂತೂ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದೀಗ ಗಾಂಧಿಯನ್ನು ಕೊಂದ ಹಿಂಸೆಯ ಪ್ರತಿಪಾದಕರು ಮತ್ತೆ ಗಾಂಧೀವಾದವನ್ನು ತಮ್ಮದೆಂದು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಂತಹ ಕುತಂತ್ರಗಳಿಂದ ಜಾತ್ಯತೀತತೆಯ ವೌಲ್ಯಗಳನ್ನು ವಿನಾಶಗೊಳಿಸಲು ಸಾಧ್ಯವಿಲ್ಲ ಎಂಬುದಕ್ಕೂ ಇತಿಹಾಸವೇ ನಿದರ್ಶನ ಎಂದವರು ಪ್ರತಿಪಾದಿಸಿದರು.

ಫ್ಯಾಸಿಸ್ಟ್ ಮನಸ್ಥಿತಿಯ ರಾಜಕಾರಣಿಗಳಿಂದಾಗಿ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಒಂದೇ ಭೂ ಪ್ರದೇಶದಲ್ಲಿ ಮಾನಸಿಕವಾಗಿ ಎರಡು ದೇಶಗಳನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಜಾತ್ಯತೀತ, ಸಹಿಷ್ಣು ಭಾರತವನ್ನು ನಾಶ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕಾಗಿ ರಾಜ್ಯಾಧಿಕಾರ ಮತ್ತು ಬೀದಿಯ ತೋಳ್ಬಲ ಒಗ್ಗೂಡಿವೆ ಎಂದು ಪ್ರೊ.ಮುಖರ್ಜಿ ಕಳವಳ ವ್ಯಕ್ತಪಡಿಸಿದರು.

ನಗರದ ಖ್ಯಾತ ವೈದ್ಯ ಹಾಗೂ ದಿವಂಗತ ಬಿ.ವಿ.ಕಕ್ಕಿಲ್ಲಾಯ ಅವರ ಪುತ್ರ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು ಸ್ವಾಗತಿಸಿದರು.

ನೆಹರೂ ದೇಶದ ಸುಭದ್ರತೆಗೆ ಭದ್ರ ಬುನಾದಿ ಹಾಕಿದ್ದರು

ದೇಶವಿಂದು ಸುಭದ್ರವಾಗಿರಲು ಕಾರಣ, ಸ್ವಾತಂತ್ರೋತ್ತರದಲ್ಲಿ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾದ ಪಂಡಿತ್ ಜವಾಹಾರ ಲಾಲ್ ನೆಹರೂರವರು ಶಿಕ್ಷಣಕ್ಕೆ ಒತ್ತು ನೀಡಿ ಕೈಗೊಂಡ ಯೋಜನೆಗಳೇ ಪ್ರಮುಖ ಕಾರಣ. ಪ್ರಥಮ ಪಂಚ ವಾರ್ಷಿಕ ಯೋಜನೆಯ ಬಹುಪಾಲು ಅನುದಾನವನ್ನು ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಸ್ಥಾಪನೆಗೆ ಮೀಸಲಿಟ್ಟಿದ್ದರು. ಅದರಿಂದಾಗಿಯೇ ಇಂದು ದೇಶವನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಿವೆ. ಕೈಗಾರೀಕರಣ ಕ್ರಾಂತಿಯ ಜತೆಜೊತೆ ಪ್ರಜಾಪ್ರಭುತ್ವದದಡಿ ಭಾರತವು ಎಂಟು ಪಟ್ಟು ವೇಗದಲ್ಲಿ 1950ರಿಂದ 1970ರ ಅವಧಿಯಲ್ಲಿ ಅಭಿವೃದ್ಧಿಗೆ ಕಾರಣವಾಯಿತು. ಇದು ನೆಹರೂ ಅವರು ಈ ದೇಶಕ್ಕೆ ನೀಡಿದ ದೊಡ್ಡ ಕೊಡುಗೆ ಎಂದು ಪ್ರೊ. ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಿನ್ನ ಅಭಿಪ್ರಾಯ ಮಂಡಿಸಿದರೆ ದೇಶದ್ರೋಹದ ಆಪಾದನೆ!

ಭಾರತದ ಸ್ವಾತಂತ್ರ ಚಳುವಳಿ ಒಂದು ಜನಸಾಮಾನ್ಯರ ಆಂದೋಲನವಾಗಿ, ಜಾತ್ಯತೀತತೆಗೆ ಪೂರಕವಾಗಿ ಪ್ರಜಾಪ್ರಭುತ್ವದ ಆಶಯಗಳ ಆಂದೋಲನವಾಗಿ ಎಂದೆಂದಿಗೂ ಜಗತ್ತಿನ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದೆ. ದೇಶದಲ್ಲಿ ವೈವಿಧ್ಯತೆ ಹೆಚ್ಚಾದಂತೆ ದೇಶದ ಸ್ವರೂಪವು ವಿಸ್ತಾರಗೊಳ್ಳುತ್ತದೆ. ಆದರೆ ಹಿಂದೂ ರಾಷ್ಟ್ರದ ಪರಿಕಲ್ಪನೆ ಎಂಬುದು ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡುವ ಹುನ್ನಾರ. ಈ ಬಗ್ಗೆ ಧ್ವನಿ ಎತ್ತಿದರೆ, ನಮ್ಮ ಭಿನ್ನ ಅಭಿಪ್ರಾಯ ಮಂಡಿಸಿದರೆ ಅದು ದೇಶದ್ರೋಹವೆನ್ನಿಸಿಕೊಳ್ಳುತ್ತದೆ. ಇದಕ್ಕಾಗಿ ಹತ್ಯೆಯೂ ನಡೆಯುತ್ತದೆ. ನರೇಂದ್ರ ದಾಬೋಲ್ಕರ್, ಪ್ರೊ. ಕಲಬುರ್ಗಿ, ಪನ್ಸಾರೆಯಂತಹವರು ಇದರಿಂದಾಗಿಯೇ ಪ್ರಾಣ ಕಳೆದುಕೊಳ್ಳಬೇಕಾಗಿದೆ ಎಂದವರು ವಿಷಾದಿಸಿದರು.

ಜಾತ್ಯತೀತತೆ ಭಾರತದ ಶಕ್ತಿ

ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಅವಿಭಾಜ್ಯ ಅಂಗ. ಇದೇ ಕಾರಣದಿಂದಾಗಿ ದೇಶದಲ್ಲಿ ಸ್ವಾತಂತ್ರದ ನಂತರದ ಪ್ರಥಮ ಚುನಾವಣೆಯಲ್ಲಿ ಹಿಂದುತ್ವದ ಪರವಿದ್ದ ಪಕ್ಷಗಳು ಶೇ. 6ರಷ್ಟು ಮತಗಳನ್ನು ಮಾತ್ರವೇ ಪಡೆದುಕೊಳ್ಳಲು ಸಾಧ್ಯವಾಯಿತು. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ದೇಶಭಕ್ತರ ಮನಸಿನಲ್ಲಿದ್ದ ರಾಷ್ಟ್ರೀಯತೆಯು ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ತತ್ವದಿಂದ ಕೂಡಿದದಾಗಿತ್ತು. ಇದೇ ತತ್ವಾದರ್ಶಗಳ ಬುನಾದಿಯ ಮೇಲೆಯೇ ಸ್ವತಂತ್ರ ಭಾರತದ ಉದಯವಾಗಿತ್ತು. ಈ ಆಶಯಗಳೊಂದಿಗೆ ಆಧುನಿಕತೆಯತ್ತ ಸಾಗುತ್ತಿರುವ ಭಾರತದಲ್ಲಿ ಇದೀಗ ಹಿಮ್ಮುಖ ಚಲನೆಗೆ ಪ್ರೇರೇಪಿಸಲಾಗುತ್ತಿದೆ. ಜಾತಿ, ಧರ್ಮ ಆಧಾರಿತ ಜನರ ವಿಭಜನೆ ಅಧಿಕಗೊಳ್ಳುತ್ತಿದೆ. ದೇಶದ ರಾಜಕೀಯ ನಾಯಕತ್ವದಲ್ಲಿ ಬಡವರ ಪರ ಕಾಳಜಿ ಕಾಣಿಸುತ್ತಿಲ್ಲ. ಇದು ನಮ್ಮ ಮುಂದಿರುವ ಪ್ರಮುಖ ಸವಾಲುಗಳು. ಈ ಬಗ್ಗೆ ಜಾಗೃತಗೊಳ್ಳಬೇಕಾದ ಅಗತ್ಯವಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News