ಅಪ್ಪನ ಅಪ್ಪುಗೆ ಮೂರರ ಹರೆಯದ ಮಗುವಿನ ಜೀವ ಉಳಿಸಿತು...!
ಅಪ್ಪನ ಅಪ್ಪುಗೆ ಮೂರರ ಹರೆಯದ ಮಗುವಿನ ಜೀವ ಉಳಿಸಿತು...!
ಬೀಜಿಂಗ್, ಅ.11: ಬಹುಅಂತಸ್ತಿನ ಕಟ್ಟಡ ಕುಸಿದು ಬೀಳುತ್ತಿದ್ದಾಗ ವ್ಯಕ್ತಿಯೊಬ್ಬರು ತನ್ನ ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದ ಪರಿಣಾಮ ಮೂರರ ಹರೆಯದ ಮಗುವೊಂದು ಪವಾಡಸದೃಶವಾಗಿ ಬದುಕುಳಿದ ಘಟನೆ ಚೀನಾದ ವೆನ್‌ಝೋದಲ್ಲಿ ನಡೆದಿದೆ.
ಆರು ಅಂತಸ್ತಿನ ವಸತಿ ಕಟ್ಟಡ ಕುಸಿದು ಬಿದ್ದ ಪರಿಣಾಮವಾಗಿ ಇಪ್ಪತ್ತೆರಡಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಆದರೆ ಅಪ್ಪನೊಂದಿಗಿದ್ದ ಮೂರರ ಹರೆಯದ ಹೆಣ್ಣು ಮಗು ವೂ ನಿಂಗ್ಸಿ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದೆ. ಸತತ ಹನ್ನೆರಡು ಗಂಟೆಗಳ ಕಾರ್ಯಾಚರಣೆಯ ಬಳಿಕ ಮಗುವನ್ನು ರಕ್ಷಿಸಲಾಯಿತು. ಆದರೆ ಮಗುವಿನ ತಂದೆ ದುರಂತಕ್ಕೆ ಬಲಿಯಾಗಿದ್ದಾರೆ.
ಇಪ್ಪತ್ತಾರರ ಹರೆಯದ ಶೂ ಫ್ಯಾಕ್ಟರಿ ನೌಕರ ಸಿಮೆಂಟ್ ಕಂಬದಡಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದರು. ಅವರ ಶವವನ್ನು ಮೇಲೆತ್ತುತ್ತಿದ್ದಾಗ ಮಗು ಪತ್ತೆಯಾಗಿದೆ. ಆದರೆ ಆತನ ಹೆಂಡತಿಯ ಶವ ಇನ್ನೂ ಸಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಕಟ್ಟಡ ಕುಸಿದು ಬೀಳುವ ಪ್ರಕರಣ ಹೆಚ್ಚುತ್ತಿದ್ದು, ಕಳಪೆ ಕಾಮಗಾರಿ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಕಳೆದ ಮೇ ತಿಂಗಳಲ್ಲಿ ಗುಯಿಝೋ ಪ್ರಾಂತ್ಯದಲ್ಲಿ ಕಟ್ಟಡ ಕುಸಿದು ಹದಿನಾರು ಮಂದಿ ಮೃತಪಟ್ಟಿದ್ದರು.