ಟ್ರಂಪ್‌ರನ್ನು ಬೆಂಬಲಿಸುವುದೋ, ಬಿಡುವುದೋ ಗೊಂದಲದಲ್ಲಿ ನಾಯಕರು

Update: 2016-10-11 14:18 GMT

ವಾಶಿಂಗ್ಟನ್, ಅ. 11: ಮಹಿಳೆಯರ ವಿರುದ್ಧ ಅಶ್ಲೀಲ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಿರುವ ವಿವಿಧ ವೀಡಿಯೊ ಮತ್ತು ಆಡಿಯೊ ಟೇಪ್‌ಗಳು ಬಹಿರಂಗಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷದ ನಾಯಕತ್ವದಲ್ಲಿ ತಲ್ಲಣ ಉಂಟಾಗಿದೆ.

ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜೊತೆಗೆ ಯಾವ ರೀತಿಯ ಸಂಬಂಧವನ್ನು ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಈ ನಾಯಕರಲ್ಲಿ ಗೊಂದಲವಿದೆ.
ಆದಾಗ್ಯೂ, ಟ್ರಂಪ್‌ರ ಅಶ್ಲೀಲ ಟೇಪ್‌ಗಳ ಹಿನ್ನೆಲೆಯಲ್ಲಿ ಅವರೊಂದಿಗಿನ ಸಂಪರ್ಕವನ್ನು ಪಕ್ಷವು ಕಡಿದುಕೊಳ್ಳುವುದು ಎಂಬ ವದಂತಿಗಳನ್ನು ರಿಪಬ್ಲಿಕನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರೀನ್ಸ್ ಪ್ರೈಬಸ್ ಬಲವಾಗಿ ತಳ್ಳಿಹಾಕಿದ್ದಾರೆ.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಪೌಲ್ ರಯಾನ್ ಟ್ರಂಪ್‌ರಿಂದ ದೂರ ಸರಿದ ಸ್ವಲ್ಪವೇ ಹೊತ್ತಿನ ಬಳಿಕ ಪ್ರೈಬಸ್‌ರ ಹೇಳಿಕೆ ಹೊರಬಿದ್ದಿದೆ.
ತಾನು ಇನ್ನು ಮುಂದೆ ಟ್ರಂಪ್‌ರನ್ನು ‘‘ಸಮರ್ಥಿಸುವುದಿಲ್ಲ’’ ಅಥವಾ ಅವರ ಪರವಾಗಿ ಪ್ರಚಾರ ಮಾಡುವುದಿಲ್ಲ, ಬದಲಿಗೆ ಕಾಂಗ್ರೆಸ್‌ನಲ್ಲಿ ತನ್ನ ಪಕ್ಷದ ಬಹುಮತವನ್ನು ಉಳಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ ಎಂಬುದಾಗಿ ರಯಾನ್ ಸೋಮವಾರ ಸಂಸದರಿಗೆ ಹೇಳಿದ್ದರು.

 ರಿಪಬ್ಲಿಕನ್ ನಾಯಕರೊಂದಿಗೆ ಖಾಸಗಿ ಕಾನ್ಫರೆನ್ಸ್ ಕರೆ ನಡೆಸಿದ ಪ್ರೈಬಸ್, ‘‘ರಿಪಬ್ಲಿಕನ್ ರಾಷ್ಟ್ರೀಯ ಸಮಿತಿ ಟ್ರಂಪ್ ಪ್ರಚಾರದೊಂದಿಗೆ ಸಂಪೂರ್ಣ ಸಮನ್ವಯ ಹೊಂದಿದೆ ಹಾಗೂ ಅವರೊಂದಿಗೆ ನಾವು ಅತ್ಯುತ್ತಮ ಸಂಬಂಧ ಹೊಂದಿದ್ದೇವೆ ಎಂಬುದನ್ನು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಇದೇ ಈ ಕರೆಯ ಸಂದೇಶ’’ ಎಂದು ಹೇಳಿದರು.

ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಟ್ರಂಪ್‌ರ ಎದುರಾಳಿಯಾಗಿದ್ದ ಟೆಡ್ ಕ್ರೂಝ್, ಟ್ರಂಪ್‌ಗೆ ತಾನು ನೀಡಿರುವ ಬೆಂಬಲವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಮಾಜಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಸೆನೆಟರ್ ಜಾನ್ ಮೆಕೇನ್ ಕಳೆದ ವಾರಾಂತ್ಯದಲ್ಲಿ ಟ್ರಂಪ್‌ಗೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
‘‘ನನ್ನ ಪಕ್ಷದ ಅಭ್ಯರ್ಥಿಯನ್ನು ತ್ಯಜಿಸುವುದು ನನಗೇನೂ ಖುಷಿ ಕೊಡುವ ಕೆಲಸವಲ್ಲ. ಆದರೆ, ನನಗೆ ಹೆಣ್ಣು ಮಕ್ಕಳಿದ್ದಾರೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News