ಗಡಿಯನ್ನು ‘ಸಂಪೂರ್ಣ ಮುಚ್ಚುವ’ ಭಾರತದ ನಿರ್ಧಾರ ಅತಾರ್ಕಿಕ: ಚೀನಾದ ಪರಿಣತರ ಅಭಿಪ್ರಾಯ

Update: 2016-10-11 14:29 GMT

ಬೀಜಿಂಗ್, ಅ. 11: ಪಾಕಿಸ್ತಾನದೊಂದಿಗಿನ ತನ್ನ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡುವ ಭಾರತದ ನಿರ್ಧಾರ ‘ಅತ್ಯಂತ ಅತಾರ್ಕಿಕ’ವಾಗಿದೆ ಎಂದು ಪರಿಣತರನ್ನು ಉಲ್ಲೇಖಿಸಿ ಚೀನಾದ ಸರಕಾರಿ ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ. ‘‘ಭಾರತ ಅತ್ಯಂತ ಅತಾರ್ಕಿಕ ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತಿದೆ. ಯಾಕೆಂದರೆ, ಉರಿ ದಾಳಿಯ ಬಳಿಕ ಯಾವುದೇ ಸಮಗ್ರ ತನಿಖೆಯನ್ನು ನಡೆಸಲಾಗಿಲ್ಲ ಹಾಗೂ ಈ ದಾಳಿಯ ಹಿಂದೆ ಪಾಕಿಸ್ತಾನವಿದೆ ಎಂಬುದಕ್ಕೆ ಪುರಾವೆಯಿಲ್ಲ’’ ಎಂದು ಶಾಂಘೈ ಅಕಾಡೆಮಿಯ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ರಿಲೇಶನ್ಸ್ ಸಂಶೋಧನಾ ವಿದ್ವಾಂಸ ಹು ಝಿಯಾಂಗ್‌ರನ್ನು ಉಲ್ಲೇಖಿಸಿ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ 3,323 ಕಿ.ಮೀ. ಉದ್ದದ ಗಡಿಯನ್ನು 2018 ಡಿಸೆಂಬರ್ ವೇಳೆಗೆ ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂಬುದಾಗಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಶುಕ್ರವಾರ ನೀಡಿರುವ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

‘‘ಸಂಪೂರ್ಣವಾಗಿ ಮುಚ್ಚಲ್ಪಟ್ಟ’’ ಗಡಿಯು ಈಗಾಗಲೇ ವಿರಳವಾಗಿರುವ ಗಡಿ ವ್ಯಾಪಾರ ಮತ್ತು ಉಭಯ ದೇಶಗಳ ನಡುವಿನ ಮಾತುಕತೆಗೆ ಮತ್ತಷ್ಟು ತಡೆ ಒಡ್ಡುತ್ತದೆ ಎಂದು ಹು ಅಭಿಪ್ರಾಯಪಟ್ಟಿದ್ದಾರೆ.

ಸಂಪೂರ್ಣ ಮುಚ್ಚಿದ ಗಡಿಯು ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಶಾಂಘೈ ಮುನಿಸಿಪಲ್ ಸೆಂಟರ್ ಫಾರ್ ಇಂಟರ್‌ನ್ಯಾಶನಲ್ ಸ್ಟಡೀಸ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ಸದರ್ನ್ ಆ್ಯಂಡ್ ಸೆಂಟ್ರಲ್ ಏಶ್ಯನ್ ಸ್ಟಡೀಸ್‌ನ ನಿರ್ದೆಶಕ ವಾಂಗ್ ಡೆಹುವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News