ನಾಗರಿಕ, ಸೇನಾ ಅಧಿಕಾರಿಗಳ ನಡುವಿನ ಘರ್ಷಣೆ ವರದಿ ಮಾಡಿದ ಪಾಕ್ ಪತ್ರಕರ್ತನಿಗೆ ಪ್ರಯಾಣ ನಿರ್ಬಂಧ

Update: 2016-10-11 14:38 GMT

ಇಸ್ಲಾಮಾಬಾದ್, ಅ. 11: ಭಯೋತ್ಪಾದಕರಿಗೆ ಸೇನೆ ನೀಡುತ್ತಿರುವ ಗುಪ್ತ ಬೆಂಬಲದ ವಿಷಯದಲ್ಲಿ ಪಾಕಿಸ್ತಾನದ ನಾಗರಿಕ ಅಧಿಕಾರಿಗಳು ಸೇನಾಧಿಕಾರಿಗಳೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ ಎಂಬುದಾಗಿ ವರದಿ ಮಾಡಿದ್ದ ಆ ದೇಶದ ಖ್ಯಾತ ಪತ್ರಕರ್ತರೊಬ್ಬರಿಗೆ ಪಾಕಿಸ್ತಾನ ಸರಕಾರ ಪ್ರಯಾಣ ನಿರ್ಬಂಧ ವಿಧಿಸಿದೆ.

ದೇಶದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಇಂಗ್ಲಿಷ್ ದೈನಿಕ ‘ಡಾನ್’ನ ಸಹಾಯಕ ಸಂಪಾದಕ ಸಿರಿಲ್ ಅಲ್ಮೇಡ, ತನ್ನನ್ನು ‘ವಿದೇಶ ಪ್ರಯಾಣ ನಿರ್ಬಂಧ ಪಟ್ಟಿ’ಯಲ್ಲಿ ಸೇರಿಸಲಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.

ಅವರ ವರದಿ ಶುಕ್ರವಾರ ಪ್ರಕಟವಾಗಿದ್ದು, ಅದನ್ನು ಪ್ರಧಾನಿ ನವಾಝ್ ಶರೀಫ್ ಕಚೇರಿಯು ಮೂರು ಬಾರಿ ನಿರಾಕರಿಸಿತ್ತು. ಅದೂ ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಬೆದರಿಕೆಗಳನ್ನು ಹಾಕಲಾಗಿತ್ತು.

‘‘ನಾನು ವಿದೇಶ ಪ್ರಯಾಣ ನಿರ್ಬಂಧ ಪಟ್ಟಿಯಲ್ಲಿದ್ದೇನೆ ಎಂದು ನನಗೆ ಮಾಹಿತಿ ನೀಡಲಾಗಿದೆ ಹಾಗೂ ಇದಕ್ಕೆ ಸಂಬಂಧಪಟ್ಟ ಪುರಾವೆಯನ್ನೂ ನೀಡಲಾಗಿದೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ. ‘‘ನನಗೆ ಬೇಸರವಾಗಿದೆ. ಇದು ನನ್ನ ಬದುಕು, ನನ್ನ ದೇಶ. ಏನು ತಪ್ಪಾಗಿದೆ’’ ಎಂಬುದಾಗಿ ಸ್ವಲ್ಪ ಹೊತ್ತಿನ ಬಳಿಕ ಅವರು ಇನ್ನೊಮ್ಮೆ ಟ್ವೀಟ್ ಮಾಡಿದರು.

 ಅಫ್ಘಾನ್ ತಾಲಿಬಾನ್‌ನೊಂದಿಗೆ ಶಾಮೀಲಾಗಿರುವ ಹಕ್ಕಾನಿ ನೆಟ್‌ವರ್ಕ್ ಮತ್ತು 2008ರ ಮುಂಬೈ ದಾಳಿಗೆ ಕಾರಣವಾಗಿರುವ ಲಷ್ಕರೆ ತಯ್ಯಬ ಮುಂತಾದ ಭಯೋತ್ಪಾದನೆ ಸಂಘಟನೆಗಳಿಗೆ ರಹಸ್ಯ ಬೆಂಬಲ ನೀಡುತ್ತಿರುವುದನ್ನು ತ್ಯಜಿಸಿ, ಇಲ್ಲವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪಾಗುವುದನ್ನು ನೋಡುತ್ತಿರಿ ಎಂಬುದಾಗಿ ನಾಗರಿಕ ಅಧಿಕಾರಿಗಳು ಶಕ್ತಿಶಾಲಿ ಸೇನೆಗೆ ಎಚ್ಚರಿಸಿದ್ದಾರೆ ಎಂಬುದಾಗಿ ತನ್ನ ವರದಿಯಲ್ಲಿ ಅಲ್ಮೇಡ ಹೇಳಿದ್ದರು.

ಉರಿಯಲ್ಲಿನ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿ ಹಾಗೂ ಬಳಿಕ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕರ ಶಿಬಿರಗಳ ಮೇಲೆ ನಡೆಸಿದ ಪ್ರತಿ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನತೆ ನೆಲೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News