ಪಾಣೆಮಂಗಳೂರು ದಸರಾ ಉತ್ಸವದಲ್ಲಿ ಆತಂಕ ಸೃಷ್ಟಿಸಿದ ಮಾತಿನ ಚಕಮಕಿ

Update: 2016-10-12 04:08 GMT

ವಿಟ್ಲ, ಅ.12: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಶಾರದೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ಉಭಯ ಕೋಮಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು ಹೊಯ್‌ಕೈ ಹಂತಕ್ಕೆ ತಲುಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪಾಣೆಮಂಗಳೂರು ಶ್ರೀವೀರ ವಿಠಲ ಸ್ವಾಮಿ ದೇವಸ್ಥಾನದ ಆಶ್ರಯದಲ್ಲಿ ನಡೆದ 92ನೆ ವರ್ಷದ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮದ ಸಮಾರೋಪವು ಮಂಗಳವಾರ ರಾತ್ರಿ ಇಲ್ಲಿನ ಎಸ್‌ವಿಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿತ್ತು. ಶಾರದಾ ದೇವಿಯ ಶೋಭಾಯಾತ್ರೆ ಮೆರವಣಿಗೆಗೆ ಮುಂಚಿತವಾಗಿ ಸಂಗೀತ ರಸಮಂಜರಿ ಆಯೋಜಿಸಲಾಗಿತ್ತು. ಈ ಸಂದರ್ಭ ಕಾರ್ಯಕ್ರಮ ಮೈದಾನದ ಹೊರಭಾಗದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಉಭಯ ಕೋಮಿಗೆ ಸೇರಿದ ಯುವಕರ ಎರಡು ಗುಂಪುಗಳ ಮಾತಿನ ಚಕಮಕಿ ನಡೆದಿದೆ. ಬಳಿಕ ಇದು ತಾರಕಕ್ಕೇರಿ ಹೊಯ್‌ಕೈ ಹಂತಕ್ಕೂ ತಲುಪಿತ್ತು. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಬಂಟ್ವಾಳ ಉಪವಿಭಾಗ ಡಿವೈಎಸ್ಪಿರವೀಶ್ ಸಿ.ಆರ್., ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ, ಬಂಟ್ವಾಳ ನಗರ ಎಸ್ಸೈ ನಂದಕುಮಾರ್, ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಹಾಗೂ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪೊಲೀಸರ ಸಕಾಲಿಕ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News