ವಿಟ್ಲದ ರವೂಫ್ ಕರ್ನಾಟಕದ ಖಾದರ್ ಆಗಿದ್ದು ಹೇಗೆ...?!

Update: 2016-10-12 05:33 GMT

ನಿಮಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚದ ‘ರವೂಫ್’ ಅವರ ಪರಿಚಯವಿದೆಯೇ ? ಇಲ್ಲವೇ ? ಹಾಗಾದರೆ ರಾಜ್ಯ  ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿರುವ ಯು.ಟಿ.ಖಾದರ್ ಅವರ ಪರಿಚಯವಿದೆಯೇ ? ಇದೆಂತಹ ಪ್ರಶ್ನೆ ಎಂದಿರಾ ? ಏಕೆಂದರೆ ಅವರೇ ಇವರು, ಇವರೇ ಅವರು !
ಸಚಿವ ಖಾದರ್ ಅವರಿಗೆ ಇಂದು 48ನೆ ಹುಟ್ಟುಹಬ್ಬದ ಸಂಭ್ರಮ. ಖಾದರ್‌ರ ತಂದೆಯ ಹುಟ್ಟೂರು ಉಪ್ಪಳದ ತುರ್ತಿಯಾಗಿದ್ದರೆ, ತಾಯಿಯ ತವರುಮನೆ ಪುತ್ತೂರಿನ ಕಡಬ (ನಂತರ ಮಂಗಳೂರು ನಂದಿಗುಡ್ಡೆಗೆ ಸ್ಥಳಾಂತರ). ವ್ಯವಹಾರ ವಿಟ್ಲದ ಪುಣಚದ ಪರಿಯಾಲ್ತಡ್ಕವಾಗಿದ್ದರೂ, ವಾಸವಾಗಿದ್ದುದು ಉಳ್ಳಾಲ ತೋಟ (ಬಳಿಕ ಮಂಗಳೂರಿನ ಕಂಕನಾಡಿ).

ಯು.ಟಿ.ಖಾದರ್ ಅವರು ಹೆಸರಾಂತ ಕಂಟ್ರಾಕ್ಟರ್‌ದಾರ ಕಡಬದ ಖಾದರ್ ಹಾಜಿಯವರ ಮೊಮ್ಮಗ. ಮಂಗಳೂರು-ಹಾಸನ ರೈಲ್ವೆ ಮಾರ್ಗ ಸೇರಿದಂತೆ ಹತ್ತು ಹಲವು ದೊಡ್ಡ ದೊಡ್ಡ ಗುತ್ತಿಗೆಗಳ ರೂವಾರಿಯಾಗಿದ್ದ ಇವರು ‘ಕಡಬಕ್ಕಾರ್ಸ್ ಖಾದರ್ ಹಾಜಿ’ ಎಂದೇ ನಾಡಿನೆಲ್ಲೆಡೆ ಗುರುತಿಸಿಕೊಂಡಿದ್ದರು. ಖಾದರ್ ಹಾಜಿಯವರ ಮಗಳು ಅವ್ವಮ್ಮ ನಸೀಮಾರನ್ನು ಮದುವೆಯಾದವರು ಉಪ್ಪಳ ತುರ್ತಿಯ ಯು.ಟಿ.ಫರೀದ್. ರಾಜಕಾರಣಿಗಳ ನಿಕಟವರ್ತಿಯಾಗಿದ್ದ ಮಾವ ಖಾದರ್ ಹಾಜಿಯವರ ಪ್ರಭಾವದಿಂದ ಯು.ಟಿ.ಫರೀದ್‌ರಿಗೆ ಉಳ್ಳಾಲ ಕ್ಷೇತ್ರದ ಶಾಸಕರಾಗಿ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಅದರಂತೆ 1972ರಲ್ಲಿ ಶಾಸಕರಾಗುವ ಮೂಲಕ ಯು.ಟಿ.ಫರೀದ್ ಸಕ್ರಿಯ ರಾಜಕಾರಣಿಯಾದರು. 1983ರಿಂದ 1999ರ ವಿರಾಮದ ಬಳಿಕ ಮತ್ತೆ ಚುನಾವಣೆ ಎದುರಿಸಿ ಶಾಸಕರಾಗಿ ಉಳ್ಳಾಲ ಕ್ಷೇತ್ರದ ಅಜಾತ ಶತ್ರುವಾಗಿ ಬೆಳೆದರು.

 ಯು.ಟಿ.ಫರೀದ್ ಶಾಸಕರಾಗಿರುವಾಗಲೇ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದು, ಬಳಿಕ  ಶಾಸಕನಾಗಿ ಜನಪ್ರಿಯರಾದರು  ರವೂಫ್ ಯಾನೆ ಯು.ಟಿ.ಖಾದರ್. 
ಅಜ್ಜ ಕಡಬಕ್ಕಾರ್ಸ್ ಖಾದರ್ ಹಾಜಿಯವರ ಹೆಸರನ್ನು ಯು.ಟಿ.ಖಾದರ್‌ಗೆ ಇಡಲಾಗಿತ್ತು. 1969 ಅಕ್ಟೋಬರ್ 12ರಂದು ಜನಿಸಿದ ಇವರ ಪೂರ್ಣ ಹೆಸರು ಯು.ಟಿ.ಖಾದರ್ ರವೂಫ್ . ಇವರು ಶಾಲೆಯಲ್ಲಿ 4ನೆ ತರಗತಿಯ ತನಕ ರವೂಫ್ ಎಂದೇ ಕರೆಯಲ್ಪಡುತ್ತಿದ್ದರು. ಆದರೆ ರವೂಫ್ ಎಂದು ಉಚ್ಚರಿಸಲು ಸ್ವಲ್ಪ ಕಷ್ಟ ಎಂದೆನಿಸಿದ ಕೆಲವರಿಂದ ಖಾದರ್ ಎಂದು ಕರೆಸಿಕೊಂಡರು. ಎಲ್ಲೆಡೆ ಖಾದರ್ ಆಗಿಯೇ ಗುರುತಿಸಿಕೊಂಡರು. ಆದರೆ ಮನೆಯವರ ಹಾಗೂ ಸಂಬಂಧಿಗಳ ಪಾಲಿಗೆ ಇಂದಿಗೂ ಅವರು ರವೂಫ್!.

ಮಂಗಳೂರು ಎಸ್.ಡಿ.ಎಂ. ಕಾಲೇಜಿನಲ್ಲಿ ಕಾನೂನು ಪದವಿ ಪಡೆಯುವಾಗ 1989 ರಲ್ಲಿ ಜಿಲ್ಲಾ ಎನ್.ಎಸ್.ಯು.ಐ. ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯದತ್ತ ವಾಲಿದರು. ಅಲ್ಲಿಂದ ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಏರಲಾರಂಭಿಸಿದ ಅವರು, ಯುವ ಕಾಂಗ್ರೆಸ್‌ನ ದ.ಕ. ಜಿಲ್ಲಾಧ್ಯಕ್ಷರೂ ಆದರು. ಕಾಂಗ್ರೆಸ್‌ನ ಹಿರಿಯ ನಾಯಕರಾದ  ಬಿ.ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್, ಎಂ.ವೀರಪ್ಪಮೊಯ್ಲಿಯವರಂತಹ ಗರಡಿಯಲ್ಲಿ ಖಾದರ್ ಪಳಗಿದರು. ರಮಾನಾಥ ರೈ ಅವರ ಸಖ್ಯವೂ ಜತೆಗಿತ್ತು. ಇವೆಲ್ಲರ ಪ್ರಭಾವದಿಂದ ಖಾದರ್ ಜನಪ್ರತಿನಿಧಿಯಾಗಿ ಬೆಳೆದರು.

ಜನರೊಂದಿಗೆ ಬೆರೆಯುವ ಸಚಿವ 
ಸದಾ ಜನರ ನಡುವೆ ಇರುವ, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣದಿಂದ ಖಾದರ್ ಸಚಿವರಾಗಿ ಬಹುಬೇಗ ಜನಪ್ರಿಯತೆ ಪಡೆದಿದ್ದಾರೆ. ಸರಳತೆ, ಜನರೊಂದಿಗೆ ಬೆರೆಯುವ ಅವರ ಸ್ವಭಾವದಿಂದಾಗಿ ಕಳೆದ ಮೂರು ವರ್ಷಗಳ ಅಲ್ಪಾವಧಿಯಲ್ಲೇ  ಕರಾವಳಿ ಕರ್ನಾಟಕವನ್ನು ದಾಟಿ ರಾಜ್ಯದೆಲ್ಲೆಡೆ ಅಭಿಮಾನಿಗಳನ್ನು ಗಳಿಸಿರುವುದು ಅವರ ಹೆಗ್ಗಳಿಕೆ. ಅರೋಗ್ಯ ಸಚಿವರಾಗಿ ಜನರಿಗೆ ಹತ್ತಿರವಾದ ಖಾದರ್ ಇಲಾಖೆಯಲ್ಲಿ ಕೆಲವು ವಿನೂತನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಷ್ಟ್ರಮಟ್ಟದಲ್ಲೂ ಖ್ಯಾತಿ , ಪ್ರಶಸ್ತಿ ಗಳಿಸಿದರು.  
ಕ್ಷೇತ್ರದ ಜನರು ಕರೆದರೆ ಅದೆಷ್ಟೇ ಚಿಕ್ಕ ಕಾರ್ಯಕ್ರಮಕ್ಕೂ ಹೋಗಿ ತಲುಪುವುದು ಖಾದರ್ ಅವರ ಇನ್ನೊಂದು ವಿಶೇಷತೆ. 
‘ನಂಬರ್ ವನ್’ ಹವ್ಯಾಸ!
 ಯು.ಟಿ.ಖಾದರ್ ಎಲ್ಲ ವಿಚಾರದಲ್ಲೂ ‘ನಂಬರ್ ವನ್’. ಅದು ಹೇಗೆಂದರೆ 1999ರಲ್ಲಿ ಖರೀದಿಸಿದ ಅವರ ಇಂಡಿಕಾ ಕಾರಿನ ನೋಂದಣಿ ಸಂಖ್ಯೆ ಒಂದು. ಬಳಿಕ ಅವರು ಖರೀದಿಸಿದ್ದ ಹಲವು ಕಾರು, ಜೀಪ್, ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆ ಕೂಡಾ ಒಂದು!. ಮಂತ್ರಿಯಾದ ಬಳಿಕ ಸರಕಾರಿ ಗೂಟದ ಕಾರಿನ ನಂಬರ್ ಕೂಡಾ ಒಂದು. ಅಷ್ಟೇ ಅಲ್ಲ ದ.ಕ., ಉಡುಪಿ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಸುತ್ತಮುತ್ತಲ ಜಿಲ್ಲೆಯಲ್ಲಿ ತಂದೆ-ಮಗ ಇಬ್ಬರು ಶಾಸಕರಾದವರಲ್ಲಿ ಖಾದರ್ ಪ್ರಥಮ. ಏಕೈಕ ಮಗಳು ಹವ್ವಾ ನಸೀಮಾ. ಪತ್ನಿ ಲಾಮೀಸ್. 

Writer - ವರದಿ: ರಶೀದ್ ವಿಟ್ಲ

contributor

Editor - ವರದಿ: ರಶೀದ್ ವಿಟ್ಲ

contributor

Similar News