ನಾಗುಂಡಿ ಹೊಳೆಗೆ ಬಿದ್ದು ಯುವಕ ಮೃತ್ಯು

Update: 2016-10-12 13:30 GMT

ಮೂಡುಬಿದಿರೆ, ಅ.12: ಕಳೆದ ನಾಲ್ಕು ದಿನಗಳ ಹಿಂದೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಂಚಿಬೈಲು ಸಮೀಪದ ನಾಗುಂಡಿ ಹೊಳೆಯ ಎರುಗುಂಡಿ ಜಲಪಾತವನ್ನು ವೀಕ್ಷಿಸಲು ಬಂದಿದ್ದ ಯುವಕರ ತಂಡದ ಪೈಕಿ ಓರ್ವ ಯುವಕ ನೀರಿಗೆ ಬಿದ್ದು ಸಾವನಪ್ಪಿದ ವಿಚಾರ ಬುಧವಾರ ಬೆಳಕಿಗೆ ಬಂದಿದ್ದು ಶವವನ್ನು ಪತ್ತೆ ಹಚ್ಚಲಾಗಿದೆ.

ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಕರಿಕುಮೇರು ನಿವಾಸಿ (ಕೊಂಪದವು ಸಮೀಪ) ಅಪ್ಪು ಗೌಡ ಎಂಬವರ ಪುತ್ರ ಗಣೇಶ್ ಗೌಡ (35) ನೀರಿಗೆ ಬಿದ್ದು ಸಾವನ್ನಪ್ಪಿದ ಯುವಕ.

ತನ್ನ ಊರಿನ ಇತರ ಯುವಕರಾದ ರಾಜೇಶ್, ಕುಮಾರ್, ಸುನೀಲ್, ಶ್ರೀಕಾಂತ್ ಎಂಬವರೊಂದಿಗೆ ಬೆಂಗಳೂರಿನಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ, ವಾರದ ಹಿಂದೆ ದಸರಾ ರಜೆಯೆಂದು ಬಂದಿದ್ದ ಈತ ತನ್ನ ಸ್ನೇಹಿತರೊಂದಿಗೆ ಅ.6ರಂದು ಬೆಳಗ್ಗೆ ಏಡಿ ಶಿಕಾರಿಗೆಂದು ಪುತ್ತಿಗೆ ಹೊಳೆಗೆ ಬಂದಿದ್ದರು. ಆದರೆ ಅಲ್ಲಿ ಏಡಿ ಸಿಗದ ಕಾರಣ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ನಾಗುಂಡಿ ಹೊಳೆಯ ಎರುಗುಂಡಿ ಜಲಪಾತ ವೀಕ್ಷಣೆಗೆ ಬಂದಿದ್ದರು. ನೀರು ಧುಮ್ಮುಕ್ಕಿ ಹರಿಯುವ ಪ್ರದೇಶದ ಹತ್ತಿರದ ಬಂಡೆಕಲ್ಲಿನಲ್ಲಿ ಗಣೇಶ್ ಕುಳಿತಿದ್ದರೆ ಅನತಿ ದೂರದಲ್ಲಿ ಉಳಿದ ಸ್ನೇಹಿತರಿದ್ದರು. ಸ್ವಲ್ಪ ಹೊತ್ತಿನಲ್ಲಿ ಗಣೇಶ್ ಆಯ ತಪ್ಪಿ ನೀರಿಗೆ ಬಿದ್ದರು. ತಕ್ಷಣ ಈತನೊಂದಿಗೆ ಬಂದಿದ್ದ ರಾಜೇಶ್ ನೀರಿಗೆ ಹಾರಿ ಗಣೇಶ್‌ರನ್ನು ರಕ್ಷಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಗಣೇಶ ತಲೆಕೆಳಗಾಗಿ ಬಿದ್ದುದರಿಂದ ಅವರ ತಲೆ ಬಂಡೆಕಲ್ಲಿನ ಮಧ್ಯೆ ಸಿಲುಕಿ ಸಾವನಪ್ಪಿದ್ದಾರೆ ಎನ್ನಲಾಗಿದೆ.

ನೀರುಪಾಲಾದ ಗಣೇಶ್ ಗೌಡ ಕಾಣದಿದ್ದಾಗ, ಅಲ್ಲಿಂದ ತೆರಳಿದ ಆತನ ಸ್ನೇಹಿತರು ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಗಣೇಶ್ ಗೌಡರ ತಾಯಿ ಇವರ ಬಳಿ ವಿಚಾರಿಸಿದಾಗ, ತಮ್ಮೊಂದಿಗೆ ಅರ್ಧ ದಾರಿವರೆಗೆ ಬಂದಿದ್ದು ಅಮೇಲೆ ಹಿಂದೆ ಬಂದಿದ್ದ ಎಂದು ಸುಳ್ಳು ಹೇಳಿದ್ದರು. ಗಣೇಶ್ ಗೌಡ ಅವರ ತಾಯಿ ಮುತ್ತಮ್ಮ ಸ್ಥಳೀಯ ಜನಪ್ರತಿನಿಧಿಗಳ ಸಹಾಯದಿಂದ ಮಂಗಳವಾರ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದು, ಆತನ ಸ್ನೇಹಿತರನ್ನು ವಿಚಾರಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.

ಗಣೇಶ್ ಗೌಡನ ಸ್ನೇಹಿತರಾದ ರಾಜೇಶ್ ಹಾಗೂ ಸುನೀಲ್‌ರನ್ನು ಬಜ್ಪೆ ಪೊಲೀಸರು ನಾಗುಂಡಿ ಫಾಲ್ಸ್ ಬಳಿ ಕರೆ ತಂದು ಘಟನೆ ವಿವರಣೆ ಪಡೆದಿದ್ದಾರೆ.

ಹೊಳೆಯಲ್ಲಿ ಶವ ಕಾಣದಿದ್ದಾಗ ಬಿಜೆಪಿ ಕ್ಷೇತ್ರಾಧ್ಯಕ್ಷ ಈಶ್ವರ ಕಟೀಲು ಅವರು ಶವ ಪತ್ತೆಗೆ ನೀರಿಗಿಳಿದಾಗ ಈಜು ತಜ್ಞರಾದ ಅಭಿಲಾಷ್ ಕಟೀಲು, ರವಿ ಪೂಜಾರಿ, ಅರುಣ್ ಭಟ್ ಹಾಗೂ ಕರುಣಾಕರ ನೀರಿಗಿಳಿದು ತಲೆ ಕೆಳಗಾಗಿ ಬಂಡೆಕಲ್ಲಿನ ಮಧ್ಯೆ ಸಿಲುಕಿದ್ದ ಶವವನ್ನು ಪತ್ತೆ ಹಚ್ಚಿ ಅಗ್ನಿಶಾಮಕ ಸಿಬ್ಬಂದಿಯ ಸಹಕಾರದಲ್ಲಿ ಮೇಲೆತ್ತಿದರು. ಶವದ ಸೊಂಟದಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದ್ದು ಈತ ಬೀಳುವ ಮೊದಲು ಮದ್ಯದ ನಶೆಯಲ್ಲಿದ್ದ ಎಂದು ಆತನ ಸ್ನೇಹಿತರು ತಿಳಿಸಿದ್ದರು.

ಬಜಪೆ ಎಸ್ಸೈ ರಾಜಾರಾಮ್, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಜಿಪಂ ಸದಸ್ಯರಾದ ಸುಚರಿತ ಶೆಟ್ಟಿ, ಕಸ್ತೂರಿ ಪಂಜ, ಜನಾರ್ಧನ ಗೌಡ, ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಕಲ್ಲುಮುಂಡ್ಕೂರು ಮತ್ತಿತರರ ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News