ಹೆಸರು ತೆಗೆದುಹಾಕುವಂತೆ ನಿವೃತ್ತ ಮುಸ್ಲಿಂ ಅಧಿಕಾರಿಗಳ ಸಂಘದಿಂದ ಸಿಎಂಗೆ ಮನವಿ

Update: 2016-10-12 14:14 GMT

ಸುರತ್ಕಲ್, ಅ12: ಇತ್ತೀಚೆಗೆ ಜೋಕಟ್ಟೆ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್. ಹುಸೈನ್ ಮತ್ತು ಇತರ ನಾಲ್ವರ ರೌಡಿಶೀಟರ್ ದಾಖಲಿಸಿರುವ ಸುರತ್ಕಲ್ ಠಾಣಾಧಿಕಾರಿ ಚೆಲುವರಾಜ್ ಕ್ರಮವನ್ನು ಖಂಡಿಸಿ ಮತ್ತು ರೌಡಿಶೀಟ್‌ನಿಂದ ಇವರ ಹೆಸರುಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ಜಿಲ್ಲಾ ನಿವೃತ್ತ ಮುಸ್ಲಿಂ ಅಧಿಕಾರಿಗಳ ಸಂಘದ ವತಿಯಿಂದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ.

ಸಂಘದ ಜಿಲ್ಲಾಧ್ಯಕ್ಷ ಝಾಹಿದ್ ಹುಸೈನ್ ನೇತೃತ್ವದ ನಿಯೋಗವು ಶಾಸಕ ಅಭಯಚಂದ್ರ ಜೈನ್ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿತು. ಜಿಲ್ಲಾ ನಿವೃತ್ತ ಮುಸ್ಲಿಂ ಅಧಿಕಾರಿಗಳ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಜೋಕಟ್ಟೆ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್. ಹುಸೈನ್, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಹೋರಾಟ ಸಮಿತಿಯ ಸಂಚಾಲಕ ಅಬೂಬಕರ್ ಬಾವ, ಮೊಯ್ದಿನ್ ಶರೀಫ್ ಮತ್ತು ಹೋರಾಟ ಸಮಿತಿಯ ಸದಸ್ಯ ವಿಜಯಾನಂದ ರಾವ್ ಎಂಬವರ ಮೇಲೆ ವಿನಾಃಕಾರಣ ಸುರತ್ಕಲ್ ಠಾಣಾಧಿಕಾರಿ ರೌಡಿಶಿಟರ್ ತೆರೆದಿದ್ದಾರೆ. ಎಂಆರ್‌ಪಿಎಲ್‌ನ ಕೋಕ್-ಸಲ್ಫರ್ ಘಟಕಗಳಿಂದ ಕೋಕ್‌ನ ಧೂಳು, ವಾಸನೆ, ಶಬ್ಧ ಮಾಲಿನ್ಯ, ಜಲಮಾಲಿನ್ಯ, ಪರಿಸರ ಮಾಲಿನ್ಯಗಳ ವಿರುದ್ಧ ಜೋಕಟ್ಟೆ ಪರಿಸರದ ಸಾರ್ವಜನಿಕರ ನೆಮ್ಮದಿ ಹಾಗೂ ಆರೋಗ್ಯಕರ ಬದುಕಿಗಾಗಿ ಕಳೆದ ಎರಡು ವರ್ಷಗಳಿಂದ ಹೋರಾಟ ಸಮಿತಿಯನ್ನು ರಚಿಸಿಕೊಂಡು ಇವರು ಹೋರಾಟ ನಡೆಸುತ್ತಿದ್ದರು. ಇದರ ಪರಿಣಾಮವಾಗಿ ರಾಜ್ಯ ಘನ ಸರಕಾರವು ಈ ಹೋರಾಟವನ್ನು ನ್ಯಾಯಬದ್ಧವೆಂದು ಪರಿಗಣಿಸಿತ್ತು. ಆದರೆ, ಎಂಎಸ್‌ಇಝೆಡ್ ಈ ಹೋರಾಟಗಳನ್ನು ಹತ್ತಿಕ್ಕಲು ಹೋರಾಟಗಾರರ ವಿರುದ್ಧ ಪಣಂಬೂರು ಠಾಣೆಯಲ್ಲಿ ಎರಡು ಮತ್ತು ಸುರತ್ಕಲ್ ಠಾಣೆಯಲ್ಲಿ ಒಂದು ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದರು.ಆದರೆ, ಸುರತ್ಕಲ್ ಠಾಣಾಧಿಕಾರಿ ಚೆಲುವರಾಜ್ ಈ ಪ್ರಕರಣದಲ್ಲಿ ಕಂಪೆನಿ ಹೆಸರಿಸಿರುವ ಆರೋಪಿಗಳ ವಿರುದ್ಧ ರೌಡಿಶೀಟರ್ ಹಾಕಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಸರಕಾರಿ ಆದೇಶದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಪ್ರಿಲ್ 27ರಂದು ನಡೆದ ಸಭೆಯಲ್ಲಿ ಈ ಕುರಿತು ಎಲ್ಲ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ತೀರ್ಮಾನಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಎಂಎಸ್‌ಝೆಡ್ ಸಂಸ್ಥೆಯೂ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಪಣಂಬೂರು ಮತ್ತು ಸುರತ್ಕಲ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದಾಗಿಯೂ, ಜೋಕಟ್ಟೆ ನಾಗರಿಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದೆಂದು ವಿನಂತಿಸಿದ್ದರು. ಹೀಗಿದ್ದರೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸಿ ಸಾಧನೆಯನ್ನು ಸಹಿಸದ ಸುರತ್ಕಲ್ ಠಾಣಾಧಿಕಾರಿ ಚೆಲುವರಾಜ್ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್.ಹುಸೈನ್ ಸಹಿತ 4 ಸದಸ್ಯರ ಹೆಸರುಗಳನ್ನು ಠಾಣೆಯ ರೌಡಿಶೀಟರ್‌ನಲ್ಲಿ ದಾಖಲಿಸಿಕೊಂಡು ನಾಲ್ಕನೆ ಕೋಕ್ ಘಟಕ ಪ್ರಾರಂಭಿಸುವ ಸಂದರ್ಭದಲ್ಲಿ ಯಾವುದೇ ಹೋರಾಟ ಮಾಡುವುದಿಲ್ಲ ಎಂದು ರೂ. 50,000 ವೌಲ್ಯದ ಬಾಂಡ್ ಮತ್ತು ಅಷ್ಟೇ  ಆಸ್ತಿ ಇರುವ ಪಹಣಿ ಪತ್ರದೊಂದಿಗೆ ಮುಚ್ಚಳಿಕೆ ನೀಡಬೇಕೆಂದು ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸರಕಾರ, ಪೊಲೀಸ್ ಅಧಿಕಾರಿ ಬಸವರಾಜು ವಿರುದ್ಧ ಕೂಲಂಕುಷ ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ನಿರಪರಾಧಿಗಳಾದ ಹೋರಾಟಗಾರರ ಹೆಸರುಗಳನ್ನು ರೌಡಿಶೀಟರ್‌ನಿಂದ ತೆಗೆದು ಹಾಕಬೇಕೆಂದು ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಆಯುಕ್ತರನ್ನು ವಿನಂತಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಚ್.ತುಂಬೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News