ಡೊನಾಲ್ಡ್ ಟ್ರಂಪ್‌ರಿಂದ ಲೈಂಗಿಕ ಕಿರುಕುಳ: ಇಬ್ಬರು ಮಹಿಳೆಯರಿಂದ ಹೊಸ ಆರೋಪ

Update: 2016-10-13 10:35 GMT

 ವಾಷಿಂಗ್ಟನ್, ಅಕ್ಟೋಬರ್ 13: ಅಮೆರಿಕನ್ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಇಬ್ಬರು ಮಹಿಳೆಯರು ರಂಗಪ್ರವೇಶಿಸಿದ್ದಾರೆ. ಟ್ರಂಪ್ ದುರುದ್ದೇಶದೊಂದಿಗೆ ತಮ್ಮ ಶರೀರವನ್ನು ಮುಟ್ಟಿದ್ದಾರೆ. ಅನುಮತಿ ಪಡೆಯದೆ ಚುಂಬಿಸಿದ್ದಾರೆ ಎಂದು ಆರೋಪಿಸಿರುವ ಇಬ್ಬರ ಮಹಿಳೆಯರ ಕುರಿತು ನ್ಯೂಯಾರ್ಕ್‌ಟೈಮ್ಸ್ ವರದಿ ಮಾಡಿದೆ.

ಆದರೆ ಆರೋಪಗಳು ಆಧಾರರಹಿತವೂ ಕಪಾಲಕಲ್ಪಿತವಾದುದು ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಸುದ್ದಿ ಪ್ರಕಟಿಸಿರುವ ನ್ಯೂಯಾರ್ಕ್‌ಟೈಮ್ಸ್ ವಿರುದ್ಧ ಕೇಸು ಹಾಕುವೆ ಎಂದು ಬೆದರಿಕೆ ಹಾಕಿದ್ದಾರೆ. ಇದಕ್ಕಾಗಿ ಕಾನೂನು ತಜ್ಞರ ಸಲಹೆ ಕೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಮೂವತ್ತು ವರ್ಷಗಳ ಹಿಂದೆ ವಿಮಾನ ಪ್ರಯಾಣದ ವೇಳೆ ಶರೀರದ ಭಾಗಗಳನ್ನು ಅನುಮತಿಯಿಲ್ಲದೆ ಸ್ಪರ್ಶಿಸಿದ್ದಾರೆ. ಟ್ರಂಪ್‌ರ ಲೈಂಗಿಕ ಚೇಷ್ಟೆಗಳಿಗೆ ಒತ್ತಾಯಿಸಿದ್ದರು ಎಂದು ಈಗ 74 ವರ್ಷ ವಯಸ್ಸಿನ ಹಿರಿಯ ಮಹಿಳೆ ಜೆಸಿಕಾ ಲೀಡ್ಸ್ ಎಂಬವರು ಬಹಿರಂಗಪಡಿಸಿದ್ದಾರೆ.

ನ್ಯೂಯಾರ್ಕ್‌ಗೆ ಪ್ರಯಾಣಿಸಿದಾಗ ತನ್ನ ಹತ್ತಿರದ ಸೀಟಿನಲ್ಲಿ ಕುಳಿತಿದ್ದ ಟ್ರಂಪ್ ಹೀಗೆ ವರ್ತಿಸಿದರು ಇದು ತಡೆಯಲು ಅಸಾಧ್ಯವಾದಾಗ ವಿಮಾನದ ಬೇರೆ ಕಡೆಗೆ ಹೋಗಿದ್ದೆ ಎಂದು ಜೆಸಿಕಾ ಲೀಡ್ಸ್ ಮೂವತ್ತು ವರ್ಷಗಳ ಹಿಂದಿನ ಕೆಟ್ಟ ಅನುಭವವನ್ನು ನೆನಪಿಸಿಕೊಂಡಿದ್ದಾರೆ. 2005ರಲ್ಲಿ ರೇಚಲ್ ಕ್ರೂಕ್ಸ್ ಎಂಬ ಮಹಿಳೆಗೆ ಲಿಫ್ಟ್‌ನಲ್ಲಿ ಚುಂಬಿಸಿದ್ದಾರೆ ಎಂದು ಇನ್ನೊಂದು ಆರೋಪ ಟ್ರಂಪ್ ವಿರುದ್ಧ ಹೊರಿಸಲಾಗಿದ್ದು, ಅಂದು ಮ್ಯಾನಹಟನ್‌ನ ಟ್ರಂಪ್ ಟವರ್‌ನ ಒಂದು ರಿಯಲ್ ಎಸ್ಟೇಟ್ ಕಂಪೆನಿಯಲ್ಲಿ ರಿಸೆಪ್ಶನಿಸ್ಟ್ ಆಗಿದ್ದ 22 ವರ್ಷ ವಯಸ್ಸಿನ ಮಹಿಳೆಯನ್ನು ಲಿಫ್ಟ್‌ನಲ್ಲಿ ಬಲವಂತವಾಗಿ ಟ್ರಂಪ್ ಚುಂಬಿಸಿದ್ದರು ಎಂದು ಆಕೆ ಹೇಳಿದ್ದಾರೆ.

 ಲೈಂಗಿಕ ಚೇಷ್ಟೆಗೆ ಸಂಬಂಧಿಸಿ ಟ್ರಂಪ್ ಹೇಳುತ್ತಿರುವ ವೀಡಿಯೊ ದೃಶ್ಯಗಳನ್ನು ಟ್ರಂಪ್ ವಾಷಿಂಗ್ಟನ್ ಪೋಸ್ಟ್ ಬಹಿರಂಗಪಡಿಸಿತ್ತು. ಇದನ್ನು ಪ್ರಸ್ತಾಪಿಸಿ ಕಳೆದ ರವಿವಾರ ನಡೆದ ಸಂವಾದದಲ್ಲಿ ಟ್ರಂಪ್ ಪ್ರತಿಸ್ಪರ್ಧಿ ಡೆಮಕ್ರಾಟಿಕ್ ಪಕ್ಷದ ಹಿಲರಿಕ್ಲಿಂಟ್‌ನ್ ತರಾಟೆಗೆತ್ತಿಕೊಂಡಿದ್ದರು. ಹೊಸ ಆರೋಪಗಳು ಮುಂದಿನ ಸಂವಾದಗಳಲ್ಲಿ ಮತ್ತು ಚುನಾವಣೆಯಲ್ಲಿ ಟ್ರಂಪ್‌ಗೆ ಭಾರೀ ಸವಾಲೊಡ್ಡಲಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News