ಬಾರ್ ಬಾಲೆಯರೊಂದಿಗೆ ನರ್ತನ; ಮೂವರು ಪೊಲೀಸರ ಅಮಾನತು

Update: 2016-10-13 13:18 GMT

ಪಾಟ್ನಾ, ಅ.13: ಬಾರ್ ಬಾಲೆಯರೊಂದಿಗೆ ನರ್ತಿಸುತ್ತಿದ್ದ ವೀಡಿಯೊ ಒಂದು ನಿನ್ನೆ ಬಹಿರಂಗವಾದ ಬಳಿಕ ಬಿಹಾರದ ಭೋಜಪುರ ಜಿಲ್ಲೆಯ ಸ್ಟೇಶನ್ ಹೌಸ್ ಆಫೀಸರ್(ಎಸ್‌ಎಚ್‌ಒ) ಒಬ್ಬ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಬಿಹಾರ ಪೊಲೀಸರಿಂದು ಅಮಾನತುಗೊಳಿಸಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಬ್ಬ ಎಸ್‌ಎಚ್‌ಒ, ಒಬ್ಬ ಎಎಸ್‌ಐ ಹಾಗೂ ಒಬ್ಬ ಕಾನ್‌ಸ್ಟೇಬಲ್ ಮೊನ್ನೆ ಕೊಯ್ಲೆವಾರ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಬಾರ್ ಬಾಲೆಯರೊಂದಿಗೆ ನರ್ತಿಸಿದ್ದ ವೀಡಿಯೊ ಬಹಿರಂಗಗೊಂಡ ಬಳಿಕ ಅವರನ್ನು ಅಮಾನತು ಮಾಡಲಾಗಿದೆ. ಅವರು ಭೋಜಪುರದ ಸಣ್ಣ ಪಟ್ಟಣವಾಗಿರುವ ಕೊಯ್ಲೆವಾರ್ ಠಾಣೆಗೆ ಸೇರಿದವರಾಗಿದ್ದಾರೆಂದು ಪಾಟ್ನಾ ವಲಯದ ಐಜಿ ಸೈಯದ್ ಹುಸೈನ್ ಖಾನ್ ಪಿಟಿಐಗೆ ಹೇಳಿದ್ದಾರೆ.

ವೀಡಿಯೊ ದೃಶ್ಯವನ್ನು ಪರಿಶೀಲಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಅವರು ತಿಳಿಸಿದ್ದಾರೆ.

ಕೊಯ್ಲವಾರ್‌ನ ಪೂಜಾ ಸಮಿತಿಯೊಂದು ವಿಜಯದಶಮಿಯ ದಿನ ಈ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿತ್ತೆಂದು ಮೂಲಗಳು ಹೇಳಿವೆ.

ಕೊಯ್ಲವಾರ್ ಠಾಣೆಯ ಎಸ್‌ಎಚ್‌ಒ ಸಂಜಯ್ ಶಂಕರ್, ಸಹಾಯಕ ಸಬ್‌ಇನ್‌ಸ್ಪೆಕ್ಟರ್ ದೇವೇಂದ್ರ ಸಿಂಗ್ ಹಾಗೂ ಕಾನ್‌ಸ್ಟೇಬಲ್ ಭೂಷಣ್ ಎಂಬವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲ್ಪಟ್ಟವರಾಗಿದ್ದಾರೆ.

ದುರ್ನಡತೆ ತೋರಿದ ಪೊಲೀಸ್ ಸಿಬ್ಬಂದಿಯ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಭೋಜಪುರದ ಪೊಲೀಸ್ ಅಧೀಕ್ಷಕರಿಗೆ ಸೂಚಿಸಲಾಗಿದೆಯೆಂದು ಖಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News