ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಆಂತರಿಕ ಯುದ್ಧಕ್ಕೆ ನಾಂದಿ ಹಾಡಿದ ಮೋದಿ: ಮುಸ್ಲಿಮ್ ಕಾನೂನು ಮಂಡಳಿ

Update: 2016-10-13 14:14 GMT

ಹೊಸದಿಲ್ಲಿ.ಅ.13: ಸರಕಾರದ ವಿರುದ್ಧ ಗುರುವಾರ ತೀವ್ರ ದಾಳಿಯನ್ನು ನಡೆಸಿರುವ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು, ಕೇಂದ್ರವು ಇಸ್ಲಾಮಿಕ್ ಕಾನೂನನ್ನು ರದ್ದುಗೊಳಿಸಲು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಮತ್ತು ದೇಶದ ವಿವಿಧತೆಯನ್ನು ನಾಶಗೊಳಿಸುತ್ತಿದೆ ಎಂದು ಆರೋಪಿಸಿದೆ.

ಏಕರೂಪ ನಾಗರಿಕ ಸಂಹಿತೆಯ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ಕೋರಿರುವ ಕಾನೂನು ಆಯೋಗದ ಪ್ರಶ್ನಾವಳಿಯನ್ನು ತಿರಸ್ಕರಿಸಿರುವ ಮಂಡಳಿಯು, ಸಂಸೃತಿಗಳ ಅನೇಕತ್ವವನ್ನು ಗೌರವಿಸಬೇಕೆಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದಲ್ಲಿ ಆಂತರಿಕ ಯುದ್ಧವೊಂದನ್ನು ಹುಟ್ಟುಹಾಕಿದ್ದಾರೆ. ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಇದಕ್ಕೆ ಉತ್ತರಿಸಲಿದ್ದಾರೆ ಎಂದು ಹೇಳಿರುವ ಮಂಡಳಿಯು,ಭಾರತದಲ್ಲಿ ಏಕ ಸಿದ್ಧಾಂತವನ್ನು ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ.

 ಮುಸ್ಲಿಮ್ ಸಮುದಾಯದಲ್ಲಿನ ತ್ರಿವಳಿ ತಲಾಖ್ ಮತ್ತು ಬಹುಪತ್ನಿತ್ವ ಪದ್ಧತಿಗಳನ್ನು ತಾನು ವಿರೋಧಿಸುವುದಾಗಿ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ಒಂದು ವಾರದ ಬಳಿಕ ಮಂಡಳಿಯ ಈ ತೀಕ್ಷ್ಣ ಹೇಳಿಕೆ ಹೊರಬಿದ್ದಿದೆ.

ಮುಸ್ಲಿಮರು ಮಾತ್ರವಲ್ಲ, ಭಾರತದಲ್ಲಿ ವಿಭಿನ್ನ ಪದ್ಧತಿಗಳನ್ನು ಹೊಂದಿರುವ ಪ್ರತಿಯೊಂದು ಸಮುದಾಯಕ್ಕೂ ಏಕರೂಪ ನಾಗರಿಕ ಸಂಹಿತೆಯು ಒಂದು ಪ್ರಶ್ನೆಯಾಗಿದೆ ಎಂದಿರುವ ಮಂಡಳಿಯು, ಅದು ದೇಶಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ. ಈ ದೇಶದಲ್ಲಿ ಹಲವಾರು ಸಂಸ್ಕೃತಿಗಳಿವೆ ಮತ್ತು ಅವುಗಳನ್ನು ಗೌರವಿಸಬೇಕಾಗಿದೆ. ಸಂವಿಧಾನದ ನೆರಳಿನಲ್ಲಿ ನಾವೀ ದೇಶದಲ್ಲಿ ಬದುಕಿದ್ದೇವೆ. ಸಂವಿಧಾನವು ನಮಗೆ ಬದುಕುವ ಮತ್ತು ನಮ್ಮ ಧರ್ಮಾಚರಣೆಯ ಹಕ್ಕನ್ನು ನೀಡಿದೆ. ಏಕರೂಪ ನಾಗರಿಕ ಸಂಹಿತೆಯನ್ನು ನಾವೆಂದೂ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News