ಉನಾ ಸಂತ್ರಸ್ತರನ್ನು ಪ್ರದರ್ಶನಕ್ಕಿಡಲಿದೆ ಆರೆಸ್ಸೆಸ್
ಹರ್ಯಾಣ, ಅ.14: ಗೋ ರಕ್ಷಕ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡರೂ ಅವರ ಬೆಂಬಲಕ್ಕೆ ನಿಂತಿದೆಯೆಂಬ ಆರೋಪ ಹೊತ್ತಿರುವ ಆರೆಸ್ಸೆಸ್ ಶುಕ್ರವಾರದಿಂದ ಬಿಜೆಪಿಗೆ ಮತ ಯಾಚಿಸುವ ಸಲುವಾಗಿ ಉನಾದಲ್ಲಿ ಗೋರಕ್ಷಕರಿಂದ ಅಮಾನುಷ ಹಲ್ಲೆಗೊಳಗಾದ ದಲಿತರನ್ನು ಉತ್ತರ ಪ್ರದೇಶದಾದ್ಯಂತ ಪೆರೇಡ್ ಮಾಡಲಿದೆಯೆಂದು ತಿಳಿದು ಬಂದಿದೆ.
ಸಂಘದ ಬೌದ್ಧ ಘಟಕ ಭಾರತೀಯ ಬೌದ್ಧಿಕ್ ಸಂಘ್ ಈ ಮೂವರು ದಲಿತ ಯುವಕರೊಂದಿಗೆ ರಾಜ್ಯದ 75 ಜಿಲ್ಲೆಗಳಾದ್ಯಂತ ಸಂಚರಿಸಲಿದೆ. ಅವರಲ್ಲೊಬ್ಬ ಎದೆ ಹಾಗೂ ತಲೆಗಾದ ಗಾಯಗಳಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿದ್ದಾನೆ. ಈ ಮೂವರಿಗೂ ಅವರು ಆ ದಿನ ಅವರು ಅನುಭವಿಸಿದ ಯಾತನೆ ಎಳ್ಳಷ್ಟೂ ಕಡಿಮೆಯಾಗಿಲ್ಲ.
ದಲಿತರ ಯಾತ್ರೆ -ದಲಿತ ಚೇತನಾ ಧಮ್ಮ ವಾಹನ್ ಯಾತ್ರ ಹಿರಿಯ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರ ನೇತೃತ್ವದಲ್ಲಿ ಶುಕ್ರವಾರ ಆರಂಭವಾಗಲಿದೆ. ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಹಿರಿಯ ಬಿಜೆಪಿ ನಾಯಕ ಸತ್ಯನಾರಾಯಣ ಜತೀಯ ಮುಂತಾದವರು ಭಾಗವಹಿಸಲಿದ್ದು ಯಾತ್ರೆಯು ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನವಾದ ಅಕ್ಟೋಬರ್ 14 ರಂದು ಆರಂಭಗೊಳ್ಳಲಿದೆ.
ದಲಿತರು, ಇತರ ಹಿಂದುಳಿದ ವರ್ಗದವರನ್ನು ಹಾಗೂ ಬೌದ್ಧ ಧರ್ಮದವರನ್ನು ಬಿಜೆಪಿಯತ್ತ ಆಕರ್ಷಿಸಲು ಬೌದ್ಧ ಭಿಕ್ಷುಗಳು ಮೇ ಅಂತ್ಯದಲ್ಲಿ ಈ ಯಾತ್ರೆಯನ್ನು ಮೂಲತಃ ಆರಂಭಿಸಿದ್ದರೂ ಅದು ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಪರಿಣಾಮ ಬೀರಿಲ್ಲವಾಗಿದೆ. ತಮ್ಮ ವಿರುದ್ಧ ದಲಿತ ವಿರೋಧಿ ಅಲೆಯಿದೆಯೆಂದು ಗೊತ್ತಿರುವ ಹೊರತಾಗಿಯೂ ಈ ಉನಾ ಸಂತ್ರಸ್ತರನ್ನು ಅದ್ಹೇಗೋ ಓಲೈಸಿ ಅವರನ್ನು ಉತ್ತರ ಪ್ರದೇಶಕ್ಕೆ ಮತಗಳನ್ನು ಸೆಳೆಯಲು ಕರೆತರಲು ಬಿಜೆಪಿ ಈಗ ಸಫಲವಾಗಿದೆ.
ದೌರ್ಜನ್ಯಕ್ಕೊಳಗಾದ ಯುವಕರಾದ ಅಶೋಕ್ ಸರ್ವಯ್ಯ, ಬೆಚಾರ್ ಸರ್ವಯ್ಯ ಮತ್ತು ರಮೇಶ್ ಸರ್ವಯ್ಯ ಅವರು ಈ ಜಾಥಾದಲ್ಲಿ ಭಾಗವಹಿಸುತ್ತಿರುವರಾದರೂ ಇನ್ನೊಬ್ಬ ಸಂತ್ರಸ್ತ ವಶ್ರಮ್ ಸರ್ವಯ್ಯ ಅವರು ಈಗಲೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವರ ಪರವಾಗಿ ಅವರ ಸಹೋದರ ಕ್ರಾಂತಿ ಸರ್ವಯ್ಯ ಈ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.
ಕೃಪೆ : catchnews.com