×
Ad

ಸರ್ಜಿಕಲ್ ದಾಳಿ ಕಟ್ಟುಕಥೆ ಎಂದ ಪಾಕ್ : ಮಾಧ್ಯಮ ವರದಿ ತಿರಸ್ಕರಿಸಿದ ಭಾರತ

Update: 2016-10-14 14:37 IST

ಹೊಸದಿಲ್ಲಿ,ಅ.14: ಪಾಕಿಸ್ತಾನಿ ದೈನಿಕ ನ್ಯೂಸ್ ಇಂಟರ್‌ನ್ಯಾಷನಲ್ ತನ್ನ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟಿಸಿರುವ ವರದಿಯೊಂದನ್ನು ತಿರಸ್ಕರಿಸಿರುವ ಭಾರತವು ಅದು ‘ಸಂಪೂರ್ಣ ಕಟ್ಟುಕಥೆ ಮತ್ತು ಆಧಾರರಹಿತ ’ಎಂದು ಬಣ್ಣಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ಯಾವುದೇ ಸರ್ಜಿಕಲ್(ಸೀಮಿತ) ದಾಳಿಗಳು ನಡೆದಿಲ್ಲ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಇಲ್ಲಿಯ ಜರ್ಮನ್ ರಾಯಭಾರಿಗೆ ತಿಳಿಸಿದ್ದಾರೆ ಎಂದು ನ್ಯೂಸ್ ಇಂಟರ್‌ನ್ಯಾಷನಲ್ ತನ್ನ ವರದಿಯಲ್ಲಿ ಹೇಳಿದೆ.

ಭಾರತವು ನಡೆಸಿದ್ದು ಸೀಮಿತ ದಾಳಿ ಅಲ್ಲವೇ ಅಲ್ಲ, ನಿಯಂತ್ರಣ ರೇಖೆಯಲ್ಲಿ ಅದು ಮಾಮೂಲಾಗಿ ನಡೆಸುತ್ತಿರುವ ಗುಂಡು ಹಾರಾಟ ಎಂದು ಪಾಕಿಸ್ತಾನವು ನಿರಂತರವಾಗಿ ಪ್ರತಿಪಾದಿಸುತ್ತಲೇ ಇದೆ. ಇದೀಗ ಇದನ್ನೇ ಮಾಧ್ಯಮಗಳ ಮೂಲಕ ವ್ಯವಸ್ಥಿತವಾಗಿ ಪ್ರಚಾರ ಮಾಡಲು ಅದು ಮುಂದಾಗಿದೆ.

ನ್ಯೂಸ್ ಇಂಟರ್‌ನ್ಯಾಷನಲ್ ಹೇಳಿದ್ದೇನು..?

ನವಾಝ್ ಶರೀಫ್ ಸಕಾರ ಮತ್ತು ಪಾಕ್ ಸೇನೆಯನ್ನು ಉತ್ತೇಜಿಸುವ ತನ್ನ ವರದಿಯಲ್ಲಿ ‘ಭಾರತದ ವಿದೇಶಾಂಗ ಕಾರ್ಯದರ್ಶಿಗಳು ಸೀಮಿತ ದಾಳಿ ನಡೆದಿರು ವುದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ಬರ್ಲಿನ್‌ನಲ್ಲಿ ಬಲ್ಲ ಅಧಿಕೃತ ಮೂಲವೊಂದು ಪಾಕಿಸ್ತಾನಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ’ಎಂದು ದೈನಿಕವು ಹೇಳಿದೆ.

ಅ.4ರಂದು ಬರ್ಲಿನ್‌ನಲ್ಲಿ ಪಾಕ್ ರಾಯಭಾರಿ ಕಚೇರಿಯ ಅಧಿಕಾರಿ ರುಕ್ಸಾನಾ ಅಫ್ಝಲ್ ಅವರು ಜರ್ಮನ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳಾದ ಕ್ಯಾರೆನ್ ಗೋಬೆಲ್ಸ್ ಮತ್ತು ಜೆನ್ಸ್ ವ್ಯಾಗ್ನರ್ ಹಾಗೂ ಅಫಘಾನ್-ಪಾಕ್ ವಿಭಾಗದ ಹಿರಿಯ ಅಧಿಕಾರಿ ಸಿಮೋನ್ ಸ್ಟೆಮ್ಮರ್ ಅವರನ್ನು ಭೇಟಿಯಾಗಿದ್ದರು. ಅಫ್ಝಲ್ ಉರಿ ಭಯೋತ್ಪಾದಕ ದಾಳಿಯ ವಿಷಯವನ್ನೆತ್ತಿದಾಗ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಮತ್ತು ದಿಲ್ಲಿಯಲ್ಲಿರುವ ಜರ್ಮನ್ ರಾಯಭಾರಿ ನಡುವೆ ನಡೆದಿತ್ತೆನ್ನಲಾದ ಮಾತುಕತೆಗಳ ಬಗ್ಗೆ ಸ್ಟೆಮ್ಮರ್ ಅವರಿಗೆ ತಿಳಿಸಿದ್ದರು ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

‘ತಥಾಕಥಿತ ಸರ್ಜಿಕಲ್ ದಾಳಿ ಮಂತ್ರದೊಂದಿಗೆ ’ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸೇರಿದಂತೆ ತನ್ನ ಹಲವಾರು ಗುರಿಗಳನ್ನು ಸಾಧಿಸಲು ಆಡಳಿತ ಬಿಜೆಪಿ ಸರಕಾರವು ಬಯಸಿದೆ ಎಂದೂ ವರದಿಯು ಇನ್ನೊಂದು ‘ಅಧಿಕೃತ ಮೂಲ’ವನ್ನು ಉಲ್ಲೇಖಿಸಿದೆ.

ಉರಿ ದಾಳಿಯ ಬಗ್ಗೆಯೂ ಶಂಕಿಸಿತ್ತು

ನ್ಯೂಸ್ ಇಂಟರ್‌ನ್ಯಾಷನಲ್ ಉರಿ ದಾಳಿಯ ಬಗ್ಗೆಯೂ ಕೊಂಕು ನುಡಿದಿತ್ತು. ದಾಳಿಯ ಮರುದಿನದ ತನ್ನ ವರದಿಯಲ್ಲಿ ಶರೀಫ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್‌ಗೆ ತೆರಳುತ್ತಿದ್ದಂತೆ ಭಾರತವು ಪಾಕಿಸ್ತಾನದ ಕಡೆಗೆ ಬೆಟ್ಟು ಮಾಡಲು ಸಾಧ್ಯವಾಗುವಂತೆ ಆಯ್ದ ಸಮಯದಲ್ಲಿಯೇ ಉರಿ ದಾಳಿ ನಡೆದಿದೆ ಎಂದು ಅದು ಹೇಳಿತ್ತು. ಉರಿ ಸೇರಿದಂತೆ ಭಾರತದ ಗುಪ್ತಚರ ವೈಫಲ್ಯಗಳನ್ನು ಟೀಕಿಸಿದ್ದ ಅದು ಭಾರತವೇ ಉರಿ ದಾಳಿಯನ್ನು ಪ್ರಾಯೋಜಿಸಿತ್ತು ಎಂದು ಅಧಿಕೃತವಾಗಿ ಹೇಳುವುದರಿಂದ ಸ್ವಲ್ಪವೇ ದೂರವುಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News