ಸೇನಾಧಿಕಾರಿ ಕಳವಾದ ಪದಕಗಳನ್ನು ಪತ್ತೆ ಹಚ್ಚಲು ಲಂಚ ಕೇಳಿದ ಪೊಲೀಸರು...!
ಭೋಪಾಲ್, ಅ.14: ಕಳವಾಗಿದ್ದ ಹುತಾತ್ಮ ಸೇನಾಧಿಕಾರಿಯೊಬ್ಬರ ಪದಕಗಳನ್ನು ಪತ್ತೆ ಹಚ್ಚಲು ಲಂಚ ನೀಡುವಂತೆ ಸೇನಾಧಿಕಾರಿಯ ತಾಯಿಗೆ ಪೊಲೀಸರು ಒತ್ತಾಯಿಸಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ.
ಪಂಜಾಬ್ ಬೆಟಾಲಿಯನ್‌ನ ಕ್ಯಾಪ್ಟನ್ ದೇವಾಶೀಶ್ ಶರ್ಮ 1994ರ ಡಿಸೆಂಬರ್ 10ರಂದು ನಡೆದ ’ ಆಪರೇಶನ್ ರಕ್ಷಕ್”ನಲ್ಲಿ ಹುತಾತ್ಮರಾಗಿದ್ದರು. ಭೋಪಾಲ್‌ನ ಶಾಹ್‌ಪುರ‍್ ನಿವಾಸಿ ಕ್ಯಾಪ್ಟನ್ ದೇವಾಶಿಶ್ ಶರ್ಮ ಅವರಿಗೆ ಸರಕಾರದಿಂದ ಕೀರ್ತಿ ಚಕ್ರ ಮತ್ತು ಜಮ್ಮ ಮತ್ತು ಕಾಶ್ಮೀರ ಸರಕಾರದಿಂದ ಶೌರ‍್ಯ ಪ್ರಶಸ್ತಿ ನೀಡಲಾಗಿತ್ತು. ಅಕ್ಟೋಬರ‍್ 21, 2014ರಲ್ಲಿ ಇವರ ಪದಕಗಳು ಮನೆಯಿಂದ ಕಾಣೆಯಾಗಿತ್ತು. ಈ ಸಂಬಂಧ ಶಾಹ್‌ಪುರ ಪೊಲೀಸರಿಗೆ ದೂರು ನೀಡಲಾಗಿತ್ತು.
ಪದಕದ ಕಳವಿನ ಬಗ್ಗೆ ತನಿಖೆ ನಡೆಸಲು ಪೊಲೀಸರು ತನ್ನಲ್ಲಿ ಲಂಚ ಕೇಳಿರುವುದಾಗಿ ಹುತಾತ್ಮ ಸೈನಿಕನ ತಾಯಿ ನಿರ್ಮಲ ಶರ್ಮ ಆರೋಪಿಸಿದ್ದಾರೆ.
ಪೊಲೀಸರು ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿ ವರದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಬೆನ್ನಲ್ಲೆ ಮಧ್ಯಪ್ರದೇಶದ ಗೃಹ ಸಚಿವ ಭೂಪಿಂದರ್ ಸಿಂಗ್ ಅವರು ಕಳವಾಗಿರುವ ಪದಕಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ತಿಳಿಸಿದ್ದಾರೆ.ಇದೇ ವೇಳೆ ಲಂಚ ಕೇಳಿದ ಪ್ರಕರಣವನ್ನು ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.