ಬೃಹತ್ ಕಾಲ್‌ಸೆಂಟರ್ ವಂಚನೆಯ ಮುಖ್ಯ ಆರೋಪಿ ಪ್ರಿಯತಮೆಗೆ ನೀಡಿದ ಉಡುಗೊರೆ ಏನು ಗೊತ್ತೇ ?

Update: 2016-10-14 11:58 GMT

ಮುಂಬೈ, ಅಕ್ಟೋಬರ್ 14: ಥಾಣೆ ಕಾಲ್ ಸೆಂಟರ್ ವಂಚನೆ ಪ್ರಕರಣದ ಮುಖ್ಯ ಆರೋಪಿ ಇಪ್ಪತ್ತಮೂರು ವರ್ಷ ವಯಸ್ಸಿನ ಯುವಕ ತನ್ನ ಪ್ರಿಯತಮೆಗೆ ಹುಟ್ಟುಹಬ್ಬದ ಕೊಡುಗೆಯಾಗಿ ಎರಡೂವರೆ ಕೋಟಿ ಬೆಲೆಬಾಳುವ ಆಡಿ ಕಾರನ್ನು ಕೊಟ್ಟಿದ್ದಾನೆ ಎಂದು ವರದಿಯಾಗಿದೆ. ಮುಖ್ಯ ಆರೋಪಿ ಸಾಗರ್ ಥಾಕರ್ ಯಾನೆ ಶಾಗಿ ತನ್ನ 21ವರ್ಷದ ಪ್ರಿಯತಮೆಗೆ ದುಬಾರಿ ಆಡಿ ಆರ್ 8 ಕಾರನ್ನು ನೀಡಿದ್ದು, ಮುಂಬೈ ಮತ್ತು ಅಹ್ಮದಾಬಾದ್‌ನ ಕಾಲ್‌ಸೆಂಟರ್ ಉದ್ಯೋಗಿಗಳನ್ನು ಬಳಸಿ ಕೋಟ್ಯಂತರ ರೂಪಾಯಿ ಮೊತ್ತದ ವಂಚನೆ ನಡೆಸಿದ್ದ. ಇಷ್ಟೇ ಅಲ್ಲದೆ ಶಾಗಿಯ ಬಳಿ ಹಲವಾರು ಅದ್ದೂರಿ ಕಾರುಗಳಿದ್ದು, ಅಹ್ಮದಾಬಾದ್‌ನಲ್ಲಿ ಇಂತಹ ಆಡಿ ಕಾರನ್ನು ಖರೀದಿಸಿದ ಪ್ರಥಮ ವ್ಯಕ್ತಿ ಈತನೇ ಎನ್ನಲಾಗಿದೆ. ಪೊಲೀಸರು ಬಂಧಿಸಿರುವ ಶಾಗಿಯ ಗೆಳೆಯರಿಂದ ಈ ವಿವರ ಪೊಲೀಸರಿಗೆ ತಿಳಿದಿದೆ. ಆದರೆ ಪ್ರಿಯತಮೆ ಎಲ್ಲಿದ್ದಾಳೆಂದು ಪೊಲೀಸರಿಗೆ ಇನ್ನೂ ಕಂಡು ಹುಡುಕಲು ಸಾಧ್ಯವಾಗಿಲ್ಲ.

ಭಾರತದ ಕಾಲ್ ಸೆಂಟರ್‌ಗಳ ಮೂಲಕ ಅಮೆರಿಕದ ಬ್ಯಾಂಕ್ ವಿವರಗಳನ್ನು ಸೋರಿಕೆ ಮಾಡಿ ಕೋಟ್ಯಂತರ ರೂಪಾಯಿ ಶಾಗಿ ವಂಚಿಸಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ಆತ ಈ ರೀತಿ ಕೋಟ್ಯಧೀಶನಾಗಿದ್ದಾನೆ. ಬಾಲ್ಯದ ಗೆಳೆಯರನ್ನು ಸೇರಿಸಿ ವಂಚನೆಯ ಶೃಂಖಲೆಯನ್ನೇ ಆತ ಹೆಣೆದಿದ್ದ. ಹೆಚ್ಚು ವಿದ್ಯಾಭ್ಯಾಸವಿಲ್ಲದ ಆದರೆ ಸಮರ್ಥರಾದ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ.

ಈತನ ಬಳಿ 800 ನೌಕರರಿದ್ದರು. 15,000 ರೂಪಾಯಿಯಿಂದ 60,000ರೂಪಾಯಿವರೆಗೂ ಸಂಬಳದ ಕೆಲಸಗಾರರು ಈತನಿಗಿದ್ದರು. ಬೊರಿವಿಲಿಯಲ್ಲಿ ವಾಸವಿರುವ ಸಹೋದರಿ ರೀಮಾ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಳು. ಕೆಲಸಗಾರರಿಗೂ ಪಾಲುದಾರಿಕೆ ನೀಡುವ ರೀತಿಯಲ್ಲಿ ಶಾಗಿ ತನ್ನ ಕಾಲ್‌ಸೆಂಟರ್‌ಗಳನ್ನು ನಡೆಸುತ್ತಿದ್ದ. ಸಿಗುವ ಲಾಭದಲ್ಲಿ ಪಾಲು ನೀಡುತ್ತಿದ್ದುದರಿಂದ ಯಾರಿಗೂ ಈತನ ವಂಚನೆ ಅರಿವಾಗಿರಲಿಲ್ಲ. ಹೆಚ್ಚು ಸಿಗುವ ಹಣವನ್ನು ಇವರೆಲ್ಲ ಮದ್ಯಪಾನ ಮಾಡಿ ಡ್ಯಾನ್ಸ್ ಬಾರ್‌ಗಳಿಗೆ ಚೆಲ್ಲಿ ಪೋಲು ಮಾಡಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News