ದೇಶದಲ್ಲಿ ಮತೀಯ ಹಿಂಸೆಗೆ ಅವಕಾಶವಿಲ್ಲ: ರಾಜನಾಥ್

Update: 2016-10-14 12:48 GMT

ಹೊಸದಿಲ್ಲಿ, ಅ.14: ಭಾರತವು ಸಹಿಷ್ಣುತೆಯ ವಿಶ್ವವಿದ್ಯಾನಿಲಯವಾಗಿದೆ. ದೇಶದಲ್ಲಿ ಮತೀಯ ಹಿಂಸಾಚಾರಕ್ಕೆ ಎಂದೂ ಅವಕಾಶ ನೀಡುವುದಿಲ್ಲವೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಶುಕ್ರವಾರ ಒತ್ತಿ ಹೇಳಿದ್ದಾರೆ.

ಭಾರತೀಯ ಕ್ರೈಸ್ತ ಮಂಡಳಿಯು ಇಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಮಾತನಾಡಿದ ಅವರು, ಶಾಂತಿಯುತ ಇರುವಿಕೆಗೆ ಸಹಿಷ್ಣುತೆ ಅಗತ್ಯ. ಭಾರತದಲ್ಲಿ ಎಲ್ಲ ಮತಗಳ ಜನರು ಶಾಂತಿಯಿಂದ ಬದುಕುತ್ತಿದ್ದಾರೆ ಹಾಗೂ ಯಾವುದೇ ತಾರತಮ್ಯದ ಹೆದರಿಕೆಯಿಲ್ಲದೆ ತಮ್ಮ ತಮ್ಮ ಮತಗಳನ್ನು ಅನುಸರಿಸುತ್ತಿದ್ದಾರೆ. ಆದುದರಿಂದ ಭಾರತವು ಸಹಿಷ್ಣುತೆಯ ವಿಶ್ವವಿದ್ಯಾಲಯವೆನಿಸಿದೆ ಎಂದರು.

ಕ್ರೈಸ್ತ ಮತವು 2 ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ಬಂದಿದೆ. ಕೇರಳವು ಸಂತ ಥಾಮಸರ ಚರ್ಚ್‌ನ ನೆಲೆಯಾಗಿದೆ. ಅದು ವಿಶ್ವದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ. ಭಾರತವು ಸಂತ ಥಾಮಸರಿಂದ ತೊಡಗಿ ಮದರ್ ತೆರೆಸಾರ ವರೆಗೆ ಕ್ರೈಸ್ತರ ಕೊಡುಗೆಗಳನ್ನು ಮರೆಯುವಂತಿಲ್ಲ. ಅವರೆಲ್ಲ ನಮ್ಮ ಸಮಾಜದಿಂದ ಕೆಟ್ಟದನ್ನು ನಿರ್ಮೂಲನಗೊಳಿಸಲು ಪ್ರಯತ್ನಿಸಿದ್ದರೆಂದು ರಾಜನಾಥ್ ಹೇಳಿದರು.

 ದಿಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ದಿಲ್ಲಿಯ ಚರ್ಚ್‌ಗಳ ಮೇಲೆ ದಾಳಿ ಘಟನೆಗಳು ನಡೆದಿದ್ದವು. ಆದರೆ, ಚುನಾವಣೆಗಳ ಮೊದಲಾಗಲಿ ಬಳಿಕವಾಗಲಿ, ದೇಶದಲ್ಲಿ ಮತೀಯ ಹಿಂಸಾಚಾರಕ್ಕೆ ಅವಕಾಶ ನೀಡುವುದಿಲ್ಲವೆಂದು ತಾನು ಹೇಳಬಯಸುತ್ತೇನೆಂದು ಅವರು ತಿಳಿಸಿದರು.

1947ರಲ್ಲಿ ಭಾರತವು ಮತೀಯ ಆಧಾರದಲ್ಲಿ ವಿಭಜನೆಗೊಂಡರೂ ಅದು ಜಾತ್ಯತೀತ ದೇಶವಾಗಿರುವ ಆಯ್ಕೆಯನ್ನು ಮಾಡಿಕೊಂಡಿದೆ. ಆದರೆ, ಭಾರತದಿಂದ ಪ್ರತ್ಯೇಕಗೊಂಡ ಪಾಕಿಸ್ತಾನ, ತಾನು ಮತೀಯ ರಾಷ್ಟ್ರವೆಂಬ ಘೋಷಣೆ ಮಾಡಿತು. ಅದು ಭಯೋತ್ಪಾದನೆಯನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆಯೆಂದು ರಾಜನಾಥ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News