ಬಾಂಗ್ಲಾಕ್ಕೆ 1.6 ಲಕ್ಷ ಕೋಟಿ ಸಾಲ ನೀಡಲು ಚೀನಾ ಸಜ್ಜು
ಢಾಕಾ, ಅ. 14: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಾಂಗ್ಲಾದೇಶಕ್ಕೆ ಶುಕ್ರವಾರದಿಂದ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶಕ್ಕೆ 24 ಬಿಲಿಯ ಡಾಲರ್ (1,60,159 ಕೋಟಿ ರೂಪಾಯಿ) ಸಾಲ ನೀಡುವ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಇದು ಬಾಂಗ್ಲಾದೇಶಕ್ಕೆ ಈವರೆಗೆ ವಿದೇಶವೊಂದರಿಂದ ಸಿಕ್ಕಿದ ಅತಿ ದೊಡ್ಡ ಸಾಲವಾಗಿದೆ. ಈ ಮೊತ್ತವನ್ನು ಅದು ವಿದ್ಯುತ್ ಸ್ಥಾವರಗಳು, ಬಂದರು ಮತ್ತು ರೈಲ್ವೆ ಹಳಿಗಳನ್ನು ನಿರ್ಮಿಸಲು ಬಳಸಲಿದೆ.
ಇದು 30 ವರ್ಷಗಳಲ್ಲಿ ಚೀನಾದ ಅಧ್ಯಕ್ಷರೊಬ್ಬರು ಬಾಂಗ್ಲಾದೇಶಕ್ಕೆ ನೀಡುತ್ತಿರುವ ಪ್ರಥಮ ಭೇಟಿಯಾಗಿದೆ. ಬಾಂಗ್ಲಾದೇಶದಲ್ಲಿ ತನ್ನ ಹೂಡಿಕೆಗಳನ್ನು ಹೆಚ್ಚಿಸಲು ನೆರೆಯ ಭಾರತ ಒತ್ತು ನೀಡುತ್ತಿರುವಂತೆಯೇ, ಆ ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪಾಲುದಾರನಾಗಲು ಚೀನಾ ಮುಂದೆ ಬಂದಿದೆ.
ಭಾರತದ ನೆರವಿನಿಂದ ಜಪಾನ್ ಕೂಡ ಬಾಂಗ್ಲಾದೇಶದ ಅಭಿವೃದ್ಧಿಗೆ ದೇಣಿಗೆ ನೀಡಲು ಮುಂದಾಗಿದೆ. ಒಂದು ಬಂದರು ಮತ್ತು ವಿದ್ಯುತ್ ಉತ್ಪಾದನಾ ಸ್ಥಾವರವನ್ನು ನಿರ್ಮಿಸಲು ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಕೊಡುಗೆಯನ್ನು ಅದು ನೀಡಿದೆ. ಇದರೊಂದಿಗೆ ಬಂಗಾಳ ಕೊಲ್ಲಿಯ 16 ಕೋಟಿ ಜನಸಂಖ್ಯೆಯ ದೇಶದಲ್ಲಿ ಪ್ರಭಾವ ಹೊಂದಲು ದೇಶಗಳ ನಡುವೆ ತುರುಸಿನ ಸ್ಪರ್ಧೆಯೇ ನಡೆದಿದೆ.
1,320 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ ಸೇರಿದಂತೆ ಸುಮಾರು 25 ಯೋಜನೆಗಳಿಗೆ ನೆರವು ನೀಡಲು ಚೀನಾ ಉದ್ದೇಶಿಸಿದೆ. ಅದು ಒಂದು ಬಂದರನ್ನು ನಿರ್ಮಿಸಲೂ ಮುಂದೆ ಬಂದಿದೆ ಎಂದು ಬಾಂಗ್ಲಾದೇಶದ ಕಿರಿಯ ಹಣಕಾಸು ಸಚಿವ ಎಂ.ಎ. ಮನ್ನನ್ ತಿಳಿಸಿದರು.