×
Ad

ಸರ್ಜಿಕಲ್ ದಾಳಿ: ಸಂಸದೀಯ ಸಮಿತಿಗೆ ಸೇನೆಯಿಂದ ವಿವರಣೆ

Update: 2016-10-14 23:15 IST

ಹೊಸದಿಲ್ಲಿ, ಅ.14: ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕರ ನೆಲೆಗಳ ಮೇಲೆ ಇತ್ತೀಚೆಗೆ ನಡೆಸಿರುವ ಸೀಮಿತ ದಾಳಿಯ ವಿವರವನ್ನು ರಕ್ಷಣೆಯ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಿಗೆ ಶುಕ್ರವಾರ ನೀಡಿದೆ. ಮೊದಲು ಅದು ಈ ವಿವರ ನೀಡಲು ನಿರಾಕರಿಸಿತ್ತು.

ಸೇನಾ ಸಿಬ್ಬಂದಿಯ ಉಪಮುಖ್ಯಸ್ಥ ಲೆ.ಜ. ಬಿಪಿನ್ ರಾವತ್ ಸೆ.29ರ ಸರ್ಜಿಕಲ್ ದಾಳಿಯ ವಿವರವನ್ನು ಸಮಿತಿಗೆ ನೀಡಿದರೆಂದು ಸಭೆಯಲ್ಲಿ ಭಾಗವಹಿಸಿದ್ದ ಕನಿಷ್ಠ ಮೂವರು ಸದಸ್ಯರು ತಿಳಿಸಿದ್ದಾರೆ.
ಸೂಕ್ಷ್ಮ ವಿಷಯದ ಕುರಿತಾಗಿ ಸೇನೆಯು ಸಂಕ್ಷಿಪ್ತ ಹೇಳಿಕೆ ನೀಡಿದೆ. ಆದರೆ, ಪ್ರಶ್ನೆಗಳಿಗೆ ಅದು ಉತ್ತರಿಸಿಲ್ಲವೆಂದು ಸದಸ್ಯರೊಬ್ಬರು ಹೇಳಿದ್ದಾರೆ.
ಆದರೆ, ಕಾಂಗ್ರೆಸ್‌ನ ಮಧುಸೂದನ ಮಿಸ್ತ್ರಿ ಪ್ರಶ್ನೆಗಳನ್ನು ಕೇಳ ಬಯಸಿದ್ದರು. ಅದಕ್ಕೆ ಸಮಿತಿಯ ಅಧ್ಯಕ್ಷ ನಿವೃತ್ತ ಮೇ.ಜ. ಬಿಸಿ ಖಂಡೂರಿ ನಕಾರ ಸೂಚಿಸಿದರು. ಇಬ್ಬರ ನಡುವೆ ಬಿಸಿಬಿಸಿ ವಾಗ್ವಾದ ನಡೆಯಿತು. ಅಂತಿಮವಾಗಿ ಯಾವ ಪ್ರಶ್ನೆಯನ್ನೂ ಕೇಳಲಾಗಿಲ್ಲವೆಂದು ಎನ್‌ಡಿಎಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಮೊದಲು, ಸ್ಥಾಯಿ ಸಮಿತಿಯು, ನಿಯಂತ್ರಣ ರೇಖೆಯಾಚೆ ನಡೆದ ಸೀಮಿತ ದಾಳಿಯ ಕುರಿತು ರಕ್ಷಣಾ ಸಚಿವಾಲಯದ ಪ್ರತಿನಿಧಿಗಳಿಂದ ವಿವರಣೆ ಪಡೆಯುವುದೆಂದಿತ್ತು. ಆದರೆ, ಬಳಿಕ ಕಾರ್ಯಸೂಚಿಯನ್ನು ಬದಲಾಯಿಸಿ, ಇ-ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಅನುಷ್ಠಾನದ ಸ್ಥಿತಿಗತಿಯ ಕುರಿತು ರಕ್ಷಣೆ, ಕಾನೂನು ಸಚಿವಾಲಯಗಳ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗದಿಂದ ವಿವರ ಆಲಿಸುವ ಬಗ್ಗೆ ನಿರ್ಧರಿಸಲಾಯಿತೆಂದು ಅವರು ಹೇಳಿದ್ದಾರೆ.
ನಿನ್ನೆ ಕಾಂಗ್ರೆಸ್‌ಗೆ ಇಬ್ಬರು ಹಿರಿಯ ಸದಸ್ಯರಾದ ಅಂಬಿಕಾ ಸೋನಿ ಹಾಗೂ ಮಿಸ್ತ್ರಿ ಕಾರ್ಯಸೂಚಿಯ ಬದಲಾವಣೆ ಅಂಗೀಕಾರಾರ್ಹವಲ್ಲವೆಂದು ಆಕ್ಷೇಪಿಸಿದ್ದರು.
ಗೌಪ್ಯದ ಹೆಸರಲ್ಲಿ ಸೀಮಿತ ದಾಳಿಯ ಕುರಿತು ಸಮಿತಿಗೆ ವಿವರಣೆ ನೀಡದಿರುವುದು ಸಂಸದರ ಮೇಲೆ ವಿಶ್ವಾಸವಿಲ್ಲ ಎನ್ನುವುದಕ್ಕೆ ಸಮವಾಗುತ್ತದೆ. ಅವರು ಗೌಪ್ಯದ ಪ್ರಮಾಣ ವಚನ ಸ್ವೀಕರಿಸಿದವರಾಗಿದ್ದಾರೆ. ಇದು ತಮಗೆ ಅಂಗೀಕಾರಾರ್ಹವಲ್ಲವೆಂದು ಅವರು ನಿನ್ನೆ ಜಂಟಿ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News