ಹಾಕಿ ಆಟಗಾರ ಸರ್ದಾರ್ ಸಿಂಗ್ ವಿರುದ್ಧ ವಿಚಾರಣೆಗೆ ಹೈಕೋರ್ಟ್ ತಡೆ
Update: 2016-10-14 23:17 IST
ಹೊಸದಿಲ್ಲಿ,ಅ.14: ರಾಷ್ಟ್ರೀಯ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ವಿರುದ್ಧ ಇಲ್ಲಿಯ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಕಲಾಪಗಳಿಗೆ ದಿಲ್ಲಿ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. 19 ವರ್ಷಕ್ಕಿಂತ ಕೆಳಗಿನ ಬ್ರಿಟಿಷ್ ಹಾಕಿ ತಂಡದ ಮಾಜಿ ಆಟಗಾರ್ತಿಯಾಗಿರುವ ತನ್ನ ಪರಿತ್ಯಕ್ತ ಗರ್ಲ್‌ಫ್ರೆಂಡ್‌ಗೆ ಲೈಂಗಿಕ ಕಿರುಕುಳ ಹಾಗೂ ಮಾನಸಿಕ,ದೈಹಿಕ ಮತ್ತು ಭಾವನಾತ್ಮಕ ಹಿಂಸೆಯನ್ನು ನೀಡಿದ್ದ ಆರೋಪವನ್ನು ಸಿಂಗ್ ಎದುರಿಸುತ್ತಿದ್ದಾರೆ.
ನ್ಯಾ.ವಿಪಿನ್ ಸಾಂಘಿ ಅವರು ವಿಚಾರಣೆಗೆ ತಡೆ ಕೋರಿ ಸಿಂಗ್ ಸಲ್ಲಿಸಿರುವ ಅರ್ಜಿಗೆ ಮುಂದಿನ ವರ್ಷದ ಜ.6ರೊಳಗೆ ಉತ್ತರಿಸುವಂತೆ ಸೂಚಿಸಿ ದೂರುದಾರ ಯುವತಿಗೆ ನೋಟಿಸನ್ನು ಜಾರಿಗೊಳಿಸಿದರು. ಇಂತಹುದೇ ನೋಟಿಸನ್ನು ಅವರು ದಿಲ್ಲಿ ಪೊಲೀಸರಿಗೂ ಹೊರಡಿಸಿದರು. ವಿಚಾರಣಾ ನ್ಯಾಯಾಲಯವು ತನ್ನ ಹೇಳಿಕೆಯನ್ನು ಆಲಿಸಲು ಅವಕಾಶ ನೀಡಲಿಲ್ಲ ಮತ್ತು ಆದೇಶವನ್ನು ಹೊರಡಿಸುವ ಮುನ್ನ ನೋಟಿಸನ್ನು ನೀಡಿರಲಿಲ್ಲ ಎಂದು ಸಿಂಗ್ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.