×
Ad

ಪಾಕ್ ನಟರಿರುವ ಸಿನೆಮಾ ಪ್ರದರ್ಶನಕ್ಕೆ ನಕಾರ

Update: 2016-10-14 23:19 IST

ಮುಂಬೈ, ಅ.14: ಪಾಕಿಸ್ತಾನದ ಕಲಾವಿದರು, ನಿರ್ದೇಶಕರು ಅಥವಾ ತಂತ್ರಜ್ಞರು ಕೆಲಸ ಮಾಡಿರುವ ಸಿನೆಮಾಗಳನ್ನು ಪ್ರದರ್ಶಿಸದಿರಲು ನಿರ್ಧರಿಸಿರುವುದಾಗಿ ಸಿನೆಮಾ ಮಾಲಕರ ಮತ್ತು ಪ್ರದರ್ಶಕರ ಸಂಘ ತಿಳಿಸಿದೆ. ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರು ಸೇನಾ ನೆಲೆಯ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ದೇಶಪ್ರೇಮಿಗಳ ಭಾವನೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂಘದ ಎಲ್ಲಾ ಸದಸ್ಯರು ಇಂತಹ ಸಿನೆಮಾಗಳನ್ನು ಪ್ರದರ್ಶಿಸಬಾರದು ಎಂದು ವಿನಂತಿಸುತ್ತೇವೆ. ಇತರ ಸಂಘದವರು ಕೂಡಾ ಈ ನಿರ್ಧಾರವನ್ನು ಬೆಂಬಲಿಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ ಎಂದು ಸಂಘದ ಉಪಾಧ್ಯಕ್ಷ ನಿತಿನ್ ದಾತಾರ್ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ. ಪಾಕ್ ನಟ ಫವಾದ್ ಖಾನ್ ನಟಿಸಿರುವ ಕರಣ್ ಜೋಹರ್ ನಿರ್ದೇಶನದ ‘ಎ ದಿಲ್ ಹೈ ಮುಷ್ಕಿಲ್’ ಚಿತ್ರ ಪ್ರದರ್ಶಿಸಲು ರಾಷ್ಟ್ರೀಯ ಥಿಯೇಟರ್ ಮಾಲಕರ ಸಂಘದವರು ನಿರಾಕರಿಸಿದ್ದಾರೆ. ರಣಬೀರ್ ಕಪೂರ್, ಐಶ್ವರ್ಯ ರೈ, ಅನುಷ್ಕಾ ಶರ್ಮ ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಸಂಘದ ಈ ನಿರ್ಧಾರ ಗುಜರಾತ್, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಸಿನೆಮಾದ ಗಳಿಕೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News