ರಣಜಿ ಟ್ರೋಫಿ: ಕರ್ನಾಟಕ 577/6ಕ್ಕೆ ಡಿಕ್ಲೇರ್
ಗ್ರೇಟರ್‌ನೊಯ್ಡ, ಅ.14: ಆರಂಭಿಕ ದಾಂಡಿಗ ಆರ್.ಸಮರ್ಥ್ ಬಾರಿಸಿದ ದ್ವಿಶತಕದ ಬೆಂಬಲದಿಂದ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 577 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ರಣಜಿ ಟ್ರೋಫಿಯ ಎರಡನೆ ಸುತ್ತಿನ ಬಿ ಗುಂಪಿನ ಪಂದ್ಯದಲ್ಲಿ ಎರಡನೆ ದಿನದಾಟವಾದ ಶುಕ್ರವಾರ 3 ವಿಕೆಟ್ ನಷ್ಟಕ್ಕೆ 248 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ 172 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 577 ರನ್ ಗಳಿಸಿದಾಗ ನಾಯಕ ವಿನಯಕುಮಾರ್ ಇನಿಂಗ್ಸ್ ಡಿಕ್ಲೇರ್ ಮಾಡಿದರು.
ಮೊದಲ ಇನಿಂಗ್ಸ್ ಆರಂಭಿಸಿರುವ ಜಾರ್ಖಂಡ್ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ.
28 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಅಬ್ಬಾಸ್ 55 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಗ ಸ್ಟುವರ್ಟ್ ಬಿನ್ನಿ(97ರನ್, 180 ಎಸೆತ, 13 ಬೌಂಡರಿ, 2 ಸಿಕ್ಸರ್) ಅವರೊಂದಿಗೆ 5ನೆ ವಿಕೆಟ್‌ಗೆ 185 ರನ್ ಸೇರಿಸಿದ ಸಮರ್ಥ್ ತಂಡದ ಮೊತ್ತವನ್ನು 487 ರನ್‌ಗೆ ತಲುಪಿಸಿದರು. ಶತಕದ ವಿಶ್ವಾಸದಲ್ಲಿದ್ದ ಬಿನ್ನಿ ಕೇವಲ 3 ರನ್‌ನಿಂದ ಶತಕ ವಂಚಿತರಾದರು.
ಬಿನ್ನಿ ಔಟಾದ ಬಳಿಕ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಿಎಂ ಗೌತಮ್(ಔಟಾಗದೆ 36) ಅವರೊಂದಿಗೆ 115 ರನ್ ಜೊತೆಯಾಟ ನಡೆಸಿದ ಸಮರ್ಥ್ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು. 432 ಎಸೆತಗಳನ್ನು ಎದುರಿಸಿದ ಸಮರ್ಥ್ 24 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 235 ರನ್ ಗಳಿಸಿ ನದೀಮ್‌ಗೆ ವಿಕೆಟ್ ಒಪ್ಪಿಸಿದರು.
ಗೌತಮ್ ಹಾಗು ಎಸ್.ಗೋಪಾಲ್(ಔಟಾಗದೆ 21) 7ನೆ ವಿಕೆಟ್‌ಗೆ 46 ರನ್ ಸೇರಿಸಿದರು. ಜಾರ್ಖಂಡ್‌ನ ಪರ ಆಶೀಷ್ ಕುಮಾರ್(3-78) ಹಾಗೂ ನದೀಮ್(2-199) ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 172 ಓವರ್‌ಗಳಲ್ಲಿ 577/6 ಡಿಕ್ಲೇರ್
(ಸಮರ್ಥ್ 235, ಸ್ಟುವರ್ಟ್ ಬಿನ್ನಿ 97, ಕರುಣ್ ನಾಯರ್ 74, ಕೆ.ಅಬ್ಬಾಸ್ 55, ಆಶೀಷ್ ಕುಮಾರ್ 3-78, ನದೀಮ್ 2-199)
ರಣಜಿ ಟ್ರೋಫಿ 2ನೆ ದಿನದ ಫಲಿತಾಂಶ
ಕಲ್ಯಾಣಿ: ಛತ್ತೀಸ್‌ಗಡ 394, ಆಂಧ್ರ 151/5
ವಿಶಾಖಪಟ್ಟಣ: ರಾಜಸ್ಥಾನ 208/3, ಅಸ್ಸಾಂ 195
ದಿಲ್ಲಿ: ಮುಂಬೈ 313/8, ಬರೋಡ 305
ಜೈಪುರ: ಉತ್ತರ ಪ್ರದೇಶ 126/3, ಬಂಗಾಳ 466
ಸೂರತ್: ಜಮ್ಮು-ಕಾಶ್ಮೀರ 227,261 ಗೋವಾ 77, 22/0
ಜೆಮ್ಶೆಡ್‌ಪುರ: ಹರ್ಯಾಣ 236/4, ಹೈದರಾಬಾದ್ 191
ನೊಯ್ಡ: ಜಾರ್ಖಂಡ್ ವಿರುದ್ಧ ಕರ್ನಾಟಕ 577/6 ಡಿಕ್ಲೇರ್
ಕೋಲ್ಕತಾ: ಹಿಮಾಚಲ ಪ್ರದೇಶದ 198/8, ಕೇರಳ 248
ರೋಹ್ಟಕ್: ಮಧ್ಯಪ್ರದೇಶ 182/5, ಪಂಜಾಬ್ 378
ಮುಂಬೈ: ದಿಲ್ಲಿ ವಿರುದ್ಧ ಮಹಾರಾಷ್ಟ್ರ 635/2 ಡಿಕ್ಲೇರ್
ಹೈದರಾಬಾದ್: ಒಡಿಶಾ 228, 62/2, ಸೌರಾಷ್ಟ್ರ 186
ಬಿಲಾಸ್‌ಪುರ: ತಮಿಳುನಾಡು 121,161/1 ರೈಲ್ವೇಸ್ 173
ಗುವಾಹಟಿ: ಸರ್ವಿಸಸ್ 202/9, ತ್ರಿಪುರಾ 275
ಗೋವಾಕ್ಕೆ 412 ರನ್ ಸವಾಲು: ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡ ಗೋವಾ ಗೆಲುವಿಗೆ 412 ರನ್ ಕಠಿಣ ಗುರಿ ನೀಡಿದೆ.
5 ವಿಕೆಟ್‌ಗೆ 43 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಗೋವಾ ತಂಡ ರಾಮ್ ದಯಾಳ್(4-15) ಹಾಗೂ ಉಮರ್ ನಝಿರ್(3-10) ದಾಳಿಗೆ ಸಿಲುಕಿ ಕೇವಲ 77 ರನ್‌ಗೆ ಆಲೌಟಾಯಿತು.
ದೇವ್‌ಸಿಂಗ್(64) ಹಾಗೂ ಪುನೀತ್ ಬಿಶ್ತ್(87) ಅರ್ಧಶತಕದ ನೆರವಿನಿಂದ 61.3 ಓವರ್‌ಗಳಲ್ಲಿ 261 ರನ್ ಬಾರಿಸಿದ ಜಮ್ಮು-ಕಾಶ್ಮೀರ ತಂಡ ಗೋವಾದ ಗೆಲುವಿಗೆ 412 ರನ್ ಗುರಿ ನೀಡಿತು.
ಯುವರಾಜ್ 177, ಪಂಜಾಬ್‌ಗೆ ಮೇಲುಗೈ
ಲಾಹ್ಲಿ, ಅ.14: ನಾಯಕ ಯುವರಾಜ್ ಸಿಂಗ್ ಹಾಗೂ ಗುರುಕೀರತ್ ಸಿಂಗ್ ಶತಕದ ನೆರವಿನಿಂದ ಪಂಜಾಬ್ ತಂಡ ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿಯ 2ನೆ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ.
3ಕ್ಕೆ 347 ರನ್‌ನಿಂದ ಆಟ ಮುಂದುವರಿಸಿದ ಪಂಜಾಬ್ ಕೇವಲ 31 ರನ್ ಸೇರಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಪಂಜಾಬ್ ಸವಾಲಿಗೆ ಉತ್ತರವಾಗಿ ಮಧ್ಯಪ್ರದೇಶ ತಂಡ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸಂಕಷ್ಟದಲ್ಲಿದೆ.
ಯುವರಾಜ್(177ರನ್) 295 ಎಸೆತಗಳಲ್ಲಿ 14 ಬೌಂಡರಿ ಬಾರಿಸಿ ತಂಡವನ್ನು ಆಧರಿಸಿದರು.