ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಗೆ ಅಮೆರಿಕದಲ್ಲಿ ಕೆಟ್ಟ ಸುದ್ದಿ!
ನ್ಯೂಯಾರ್ಕ್, ಅ.15: ಸ್ಯಾಮ್ ಸಂಗ್ ಕಂಪೆನಿಯ ಗ್ಯಾಲಕ್ಸಿ ನೋಟ್ 7 ಮೊಬೈಲ್ ಫೋನ್ ಹಲವೆಡೆ ಸ್ಫೋಟಗೊಂಡ ಘಟನೆಯ ಹಿನ್ನೆಲೆಯಲ್ಲಿ ಈ ಫೋನನ್ನು ಅಮೆರಿಕದ ಎಲ್ಲಾ ವಿಮಾನಗಳಲ್ಲಿ ನಿಷೇಧಿಸಲಾಗಿದೆ. ಈ ಬಗ್ಗೆ ಅಮೆರಿಕದ ಟ್ರಾನ್ಸ್ ಪೋರ್ಟೇಶನ್ ಆ್ಯಂಡ್ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ ಶುಕ್ರವಾರ ಅಪರಾಹ್ನ ಆದೇಶವೊಂದನ್ನು ಜಾರಿಗೊಳಿಸಿದೆ. ಇಂದಿನಿಂದ ಈ ಆದೇಶ ಜಾರಿಗೆ ಬರಲಿದೆ.
ವಿಮಾನ ಪ್ರಯಾಣದ ಸಮಯ ಈ ಫೋನು ಯಾರ ಬಳಿಯಾದರೂ ಇರುವುದು ಪತ್ತೆಯಾದಲ್ಲಿ ಆ ಫೋನನ್ನು ವಶಪಡಿಸಿಕೊಳ್ಳಲಾಗುವುದಲ್ಲದೆ, ಸಂಬಂಧಿತ ಪ್ರಯಾಣಿಕರ ಮೇಲೆ ದಂಡವನ್ನೂ ವಿಧಿಸಲಾಗುವುದು. ಚೆಕ್ ಮಾಡಲ್ಪಟ್ಟ ಲಗೇಜಿನಲ್ಲಿ ಯಾರಾದರೂ ಈ ಫೋನನ್ನು ಇರಿಸುವ ಪ್ರಯತ್ನ ಮಾಡಿದ್ದೇ ಆದಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದೆಂದೂ ಎಚ್ಚರಿಸಲಾಗಿದೆ.
ಈ ಫೋನನ್ನು ಏರ್ ಕಾರ್ಗೋ ಮೂಲಕ ಕೂಡ ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ಹಿಂದೆ ವಿಮಾನದಲ್ಲಿ ಪ್ರಯಾಣಿಸುವಾಗ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಹೊಂದಿದ ಪ್ರಯಾಣಿಕರು ಅದನ್ನು ಸ್ವಿಚ್ ಆಫ್ ಮಾಡಬೇಕೆಂದು ಎಫ್ ಎ ಎ ಆದೇಶಿಸಿತ್ತು. ಈ ಫೋನ್ ಖರೀದಿಸಿದ ಗ್ರಾಹಕರಿಗೆ ಅದನ್ನು ಸ್ವಿಚ್ ಆಫ್ ಮಾಡುವಂತೆ ಸ್ಯಾಮ್ ಸಂಗ್ ಕಂಪೆನಿ ವಿನಂತಿಸಿದ ನಾಲ್ಕು ದಿನಗಳ ನಂತರವೇ ಅಮೆರಿಕದಲ್ಲಿ ಹೊಸ ಆದೇಶ ಹೊರಡಿಸಲಾಗಿದೆ.
ಸ್ಯಾಮ್ ಸಂಗ್ ತನ್ನ ಈ ಗ್ಯಾಲಕ್ಸಿ ನೋಟ್ 7 ಅನ್ನುಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಿದ್ದರೆ ಕೆಲವೇ ದಿನಗಳಲ್ಲಿ ಫೋನುಗಳು ಸ್ಫೋಟಗೊಳ್ಳುತ್ತಿವೆ ಎಂದು ಹಲವು ಗ್ರಾಹಕರು ದೂರಿದ್ದರು. ದೋಷಪೂರಿತ ಲೀಥಿಯಂ ಇಯಾನ್ ಬ್ಯಾಟರಿಗಳಿಂದಾಗಿ ಹೀಗಾಗುತ್ತಿದೆ ಎಂದು ಕಂಪೆನಿ ವಿವರಣೆ ನೀಡಿತ್ತು. ನಂತರದ ಬೆಳವಣಿಗೆಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾದ ತನ್ನ 2.5 ಮಿಲಿಯನ್ ಗ್ಯಾಲಕ್ಸಿ ನೋಟ್ 7 ಫೋನುಗಳನ್ನು ಸ್ಯಾಮ್ ಸಂಗ್ ಹಿಂಪಡೆದುಕೊಂಡಿತ್ತು.