ಸೌರಭ್ ಹ್ಯಾಟ್ರಿಕ್ ಫೈನಲ್

Update: 2016-10-15 17:35 GMT

ತೈಪೆ ಸಿಟಿ, ಅ.15: ಭಾರತದ ಶಟ್ಲರ್ ಸೌರಭ್ ವರ್ಮ ಸತತ ಮೂರನೆ ಬಾರಿ ಚೈನೀಸ್ ತೈಪೆ ಗ್ರಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ 2011ರ ನ್ಯಾಶನಲ್ ಚಾಂಪಿಯನ್ ಸೌರಭ್ ಸ್ಥಳೀಯ ಆಟಗಾರ ಸು ಜೆನ್ ಹಾವೊರನ್ನು 11-4, 11-7, 11-9 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು.

ಸೌರಭ್ ಟೂರ್ನಿಯಲ್ಲಿ ಸತತ ಮೂರನೆ ಬಾರಿ ಫೈನಲ್‌ಗೆ ತಲುಪಿ ಗಮನ ಸೆಳೆದರು. ಬೆಲ್ಜಿಯಂ ಹಾಗೂ ಪೊಲೆಂಡ್‌ನಲ್ಲಿ ನಡೆದಿದ್ದ ಕಳೆದೆರೆಡು ಇಂಟರ್‌ನ್ಯಾಶನಲ್ ಚಾಲೆಂಜರ್‌ನಲ್ಲಿ ಸೌರಭ್ ಪ್ರಶಸ್ತಿ ಸುತ್ತಿಗೆ ತಲುಪಿದ್ದರು.

ಹಲವು ಬಾರಿ ಗಾಯದ ಸಮಸ್ಯೆಗೆ ಒಳಗಾಗಿದ್ದ ಸೌರಭ್ ಇದೀಗ ಫೈನಲ್‌ಗೆ ತಲುಪಿ ಉತ್ತಮ ಸಾಧನೆ ಮಾಡಿದ್ದು, ಪ್ರಶಸ್ತಿ ಸುತ್ತಿನಲ್ಲಿ ಮಲೇಷ್ಯಾದ ಡರೆನ್ ಲಿವ್ ಅಥವಾ ಚೈನೀಸ್ ತೈಪೆಯ ಲಿನ್ ಯೂ ಸಿಯೆನ್‌ರನ್ನು ಎದುರಿಸಲಿದ್ದಾರೆ.

ಮಧ್ಯಪ್ರದೇಶದ 23ರ ಪ್ರಾಯದ ಸೌರಭ್ ಆರಂಭದಲ್ಲಿ 2-0 ಮುನ್ನಡೆ ಸಾಧಿಸಿದ್ಛ್ದು, ಮೂರುನೇರ ಅಂಕಗಳ ಮೂಲಕ ಮೊದಲ ಗೇಮ್ಞ್‌ನ್ನು ಗೆದ್ದುಕೊಂಡರು.

ಎರಡನೆ ಗೇಮ್‌ನಲ್ಲಿ ಆರಂಭದಲ್ಲಿ 2-0 ಮುನ್ನಡೆ ಸಾಧಿಸಿದ್ದ ಸೌರಭ್ 11-7 ಅಂತರದಿಂದ ಜಯ ಸಾಧಿಸಿದರು. ಮೂರನೆ ಗೇಮ್‌ನಲ್ಲಿ ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಅಂತಿಮವಾಗಿ ಸೌರಭ್ 11-9 ರಿಂದ 3ನೆ ಪಂದ್ಯವನ್ನು ಜಯಿಸಿದರು.

ಸೌರಭ್ 2013ರಲ್ಲಿ ಟಾಟಾ ಓಪನ್ ಇಂಡಿಯಾ ಇಂಟರ್‌ನ್ಯಾಶನಲ್ ಚಾಲೆಂಜ್, ಇರಾನ್ ಇಂಟರ್‌ನ್ಯಾಶನಲ್ ಚಾಲೆಂಜ್ ಹಾಗೂ 2014ರಲ್ಲಿ ಆಸ್ಟ್ರಿಯನ್ ಇಂಟರ್‌ನ್ಯಾಶನಲ್ ಟೂರ್ನಿಯನ್ನು ಜಯಿಸಿದ್ದಾರೆ. 2011ರಲ್ಲಿ ಚೊಚ್ಚಲ ಬೆಹರಿನ್ ಇಂಟರ್‌ನ್ಯಾಶನಲ್ ಚಾಲೆಂಜರ್ ಜಯಿಸಿದ್ದು, ಅದೇ ವರ್ಷ ಸೈಯದ್ ಮೋದಿ ಜಿಪಿ ಟೂರ್ನಿಯಲ್ಲಿ ರನ್ನರ್-ಅಪ್‌ಗೆ ತೃಪ್ತಿಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News