ಸೌರಭ್ ವರ್ಮಗೆ ಸಿಂಗಲ್ಸ್ ಪ್ರಶಸ್ತಿ

Update: 2016-10-16 17:52 GMT

ತೈಪೆ ಸಿಟಿ, ಅ.16: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಸೌರಭ್ ವರ್ಮ ಚೈನೀಸ್ ತೈಪೆ ಗ್ರಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಲೇಷ್ಯಾದ ಡರೆನ್ ಲಿವ್‌ರನ್ನು ಮಣಿಸಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

 ಇಲ್ಲಿ ರವಿವಾರ ನಡೆದ 55,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶದ 23ರ ಪ್ರಾಯದ ವರ್ಮ 12-10, 12-10, 3-3 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದರು. ಸೌರಭ್ ಎದುರಾಳಿ ಡೆರನ್ ಲಿವ್ 3ನೆ ಗೇಮ್ ವೇಳೆ ಭುಜನೋವು ಕಾಣಿಸಿಕೊಂಡ ಕಾರಣ ಪಂದ್ಯದಿಂದ ಹಿಂದೆ ಸರಿದರು.

ಸೌರಭ್ ಬೆಲ್ಜಿಯಂ ಹಾಗೂ ಪೊಲೆಂಡ್‌ನಲ್ಲಿ ನಡೆದಿದ್ದ ಚೈನೀಸ್ ತೈಪೆ ಟೂರ್ನಿಯಲ್ಲಿ ಎರಡು ಬಾರಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪ್ರಶಸ್ತಿ ಜಯಿಸುವ ಮೂಲಕ ಕನಸು ಈಡೇರಿಸಿಕೊಂಡಿದ್ದಾರೆ. ಮಣಿಕಟ್ಟು ಹಾಗೂ ಮಂಡಿನೋವಿನಿಂದಾಗಿ ಕಳೆದ ಒಂದು ವರ್ಷದಿಂದ ಸಕ್ರಿಯ ಬ್ಯಾಡ್ಮಿಂಟನ್‌ನಿಂದ ದೂರ ಉಳಿದಿದ್ದ ಸೌರಭ್‌ಗೆ ಈ ಪ್ರಶಸ್ತಿ ಹೊಸ ಹುಮ್ಮಸ್ಸು ನೀಡಿದೆ.

‘‘ಇದು ನನ್ನ ಪಾಲಿಗೆ ಅತ್ಯಂತ ಮಹತ್ವದ ಹಾಗೂ ಅಗತ್ಯದ ಗೆಲುವಾಗಿದೆ. ನಾನು ಬೆಲ್ಜಿಯಂ ಹಾಗೂ ಪೊಲೆಂಡ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಎತ್ತಲು ಸಾಧ್ಯವಾಗಿರಲಿಲ್ಲ. ಈ ಬಾರಿ ಇಲ್ಲಿ ಹಿಂದಿನ ತಪ್ಪನ್ನು ಮಾಡಬಾರದು ಎಂದು ನಿಶ್ಚ್ಚಯಿಸಿಕೊಂಡಿದ್ದೆ. ಇಲ್ಲಿ ಪ್ರಶಸ್ತಿ ಜಯಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಸೌರಭ್ ವರ್ಮ ಪ್ರತಿಕ್ರಿಯಿಸಿದರು.

 ಸೌರಭ್ ಮೊದಲ ಪಂದ್ಯದಲ್ಲಿ ಆರಂಭದಲ್ಲಿ 5-3 ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದಿದ್ದರು. ಆದರೆ, ಲೀವ್ 8-5 ಮುನ್ನಡೆಯೊಂದಿಗೆ ತಿರುಗೇಟು ನೀಡಿದರು. ಸತತ 5 ಅಂಕ ಬಾಚಿಕೊಂಡ ಸೌರಭ್ ಮೊದಲ ಗೇಮ್‌ನ್ನು 12-10 ರಿಂದ ಗೆದ್ದುಕೊಂಡರು.

ಎರಡನೆ ಗೇಮ್‌ನಲ್ಲಿ ಲೀವ್ ಮತ್ತೊಮ್ಮೆ 5-1 ಮುನ್ನಡೆ ಸಾಧಿಸಿ ಸೌರಭ್‌ಗೆ ಪೈಪೋಟಿ ನೀಡಿದರು. 10-6 ಮುನ್ನಡೆಯಲ್ಲಿದ್ದ ಲೀವ್ ವಿರುದ್ಧ ತಿರುಗಿ ಬಿದ್ದ ಸೌರಭ್ ಮತ್ತೊಮ್ಮೆ 6 ಅಂಕಗಳನ್ನು ಬಾಚಿಕೊಂಡು 2ನೆ ಗೇಮ್‌ನ್ನು 12-10 ರಿಂದ ಗೆದ್ದುಕೊಂಡರು.

ಮೂರನೆ ಗೇಮ್ 3-3 ಸಮಬಲದಲ್ಲಿದ್ದಾಗ ಭುಜನೋವು ಕಾಣಿಸಿಕೊಂಡ ಕಾರಣ ಲೀವ್ ಪಂದ್ಯದಿಂದ ಹಿಂದೆ ಸರಿದರು. ಸೌರಭ್ ಜಯಶಾಲಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News