ಇಶಾನ್ ಕಿಶನ್ ಸಾಹಸ, ಕರ್ನಾಟಕ-ಜಾರ್ಖಂಡ್ ಪಂದ್ಯ ಡ್ರಾ

Update: 2016-10-16 17:55 GMT

ಗ್ರೇಟರ್ ನೊಯ್ಡ, ಅ.16: ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸಾಹಸದ ನೆರವಿನಿಂದ ಜಾರ್ಖಂಡ್ ತಂಡ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿಯ 2ನೆ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದೆ.

6 ವಿಕೆಟ್ ನಷ್ಟಕ್ಕೆ 309 ರನ್‌ನಿಂದ 4ನೆ ಹಾಗೂ ಅಂತಿಮ ದಿನದಾಟವನ್ನು ಮುಂದುವರಿಸಿದ ಜಾರ್ಖಂಡ್ 115.1 ಓವರ್‌ಗಳಲ್ಲಿ 374 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಜೇಯ 159 ರನ್(211 ಎಸೆತ, 16 ಬೌಂಡರಿ, 7 ಸಿಕ್ಸರ್) ಗಳಿಸಿ ತಂಡದ ಪರ ಏಕಾಂಗಿ ಹೋರಾಟ ನೀಡಿದರು.

ಕರ್ನಾಟಕದ ಪರ ಗೌತಮ್(3-97), ಎಸ್.ಗೋಪಾಲ್(3-114) ತಲಾ 3 ವಿಕೆಟ್‌ಗಳನ್ನು ಕಬಳಿಸಿದರು.

 ಎರಡನೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವ ಮೊದಲು 3 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿತು. ಕರುಣ್ ನಾಯರ್(ಅಜೇಯ 54) ಹಾಗು ಕೆ.ಅಬ್ಬಾಸ್(ಅಜೇಯ 51) ಅರ್ಧಶತಕ ಸಿಡಿಸಿದರು. ಈ ಜೋಡಿ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 95 ರನ್ ಸೇರಿಸಿತು.

ಜಾರ್ಖಂಡ್‌ನ ಪರ ಎಸ್‌ಎಸ್ ಖಾದ್ರಿ(3-62) ಯಶಸ್ವಿ ಬೌಲರ್ ಎನಿಸಿಕೊಂಡರು. ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಮೊದಲ ಇನಿಂಗ್ಸ್‌ನಲ್ಲಿ 203 ರನ್ ಮುನ್ನಡೆ ಪಡೆದಿದ್ದ ಕರ್ನಾಟಕ 3 ಅಂಕವನ್ನು ಪಡೆದರೆ, ಜಾರ್ಖಂಡ್ 1 ಅಂಕ ಪಡೆದಿದೆ.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ ಪ್ರಥಮ ಇನಿಂಗ್ಸ್: 577/6 ಡಿಕ್ಲೇರ್

ಜಾರ್ಖಂಡ್ ಪ್ರಥಮ ಇನಿಂಗ್ಸ್: 115.1 ಓವರ್‌ಗಳಲ್ಲಿ 374

(ಇಶಾನ್ ಕಿಶನ್ ಅಜೇಯ 159, ಸೌರಭ್ ತಿವಾರಿ 91, ಆನಂದ್ ಸಿಂಗ್ 45, ಗೌತಮ್ 3-97, ಎಸ್.ಗೋಪಾಲ್ 3-114, ಮಿಥುನ್ 2-61)

ಕರ್ನಾಟಕ ದ್ವಿತೀಯ ಇನಿಂಗ್ಸ್: 162/3

(ಕರುಣ್ ನಾಯರ್ ಅಜೇಯ 54, ಕೆ.ಅಬ್ಬಾಸ್ ಅಜೇಯ 51, ಖಾದ್ರಿ 3-62)

ರಣಜಿ ಟ್ರೋಫಿ ಅಂತಿಮ ದಿನದ ಫಲಿತಾಂಶ

ಕಲ್ಯಾಣಿ: ಛತ್ತೀಸ್‌ಗಡ (394)-ಆಂಧ್ರ (199, 282/8) ಪಂದ್ಯ ಡ್ರಾ

ದಿಲ್ಲಿ: ಮುಂಬೈ (323,224/5)-ಬರೋಡ (305, 383/5 ಡಿಕ್ಲೇರ್) ಪಂದ್ಯ ಡ್ರಾ

ಜೈಪುರ: ಉತ್ತರ ಪ್ರದೇಶ (410,70/0) ಬಂಗಾಳ (466,274/6 ಡಿಕ್ಲೇರ್) ಪಂದ್ಯ ಡ್ರಾ

ಜೆಮ್ಶೆಡ್‌ಪುರ: ಹೈದರಾಬಾದ್ (191, 224) ವಿರುದ್ಧ ಹರ್ಯಾಣಕ್ಕೆ (331, 85/2) 8 ವಿಕೆಟ್‌ಗಳ ಜಯ

ನೊಯ್ಡ: ಜಾರ್ಖಂಡ್ (374)-ಕರ್ನಾಟಕ (577/6 ಡಿಕ್ಲೇರ್, 162/3) ಪಂದ್ಯ ಡ್ರಾ

ರೋಹ್ಟಕ್: ಮಧ್ಯಪ್ರದೇಶ (247, 180) ವಿರುದ್ಧ ಪಂಜಾಬ್‌ಗೆ (378, 175/9 ಡಿಕ್ಲೇರ್)126 ರನ್ ಜಯ

ಮುಂಬೈ: ದಿಲ್ಲಿ (590)-ಮಹಾರಾಷ್ಟ್ರ (635/2, 58/0) ಪಂದ್ಯ ಡ್ರಾ

  ಹೈದರಾಬಾದ್: ಸೌರಾಷ್ಟ್ರ (186,179) ವಿರುದ್ಧ ಒಡಿಶಾಕ್ಕೆ (228, 169) 32 ರನ್ ರೋಚಕ ಜಯ

ಬಿಲಾಸ್‌ಪುರ: ತಮಿಳುನಾಡುವಿಗೆ (121, 452/8 ಡಿಕ್ಲೇರ್) ರೈಲ್ವೇಸ್ (173, 226) ವಿರುದ್ಧ 174 ರನ್ ಜಯ

ಗುವಾಹಟಿ: ಸರ್ವಿಸಸ್ (233, 163) ವಿರುದ್ಧ ತ್ರಿಪುರಾಕ್ಕೆ(275, 340/3 ಡಿಕ್ಲೇರ್) 219 ರನ್ ಜಯ.

ರಿಷಭ್ ಪಂತ್ ತ್ರಿಶತಕ ವ್ಯರ್ಥ: ಮಹಾರಾಷ್ಟ್ರಕ್ಕೆ ಮುನ್ನಡೆ

ಮುಂಬೈ, ಅ.16: ದಿಲ್ಲಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಆಕರ್ಷಕ ತ್ರಿಶತಕ ಬಾರಿಸಿದ ಹೊರತಾಗಿಯೂ ಮಹಾರಾಷ್ಟ್ರ ತಂಡ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದು ಮೂರಂಕ ಪಡೆದಿದೆ.

ರನ್ ಹೊಳೆ ಹರಿದ ಈ ಪಂದ್ಯ ಶನಿವಾರ ಡ್ರಾನಲ್ಲಿ ಕೊನೆಗೊಂಡಿದ್ದು, ಪಂತ್ ಕೇವಲ 326 ಎಸೆತಗಳಲ್ಲಿ 42 ಬೌಂಡರಿ ಹಾಗೂ 9 ಸಿಕ್ಸರ್‌ಗಳನ್ನು ಒಳಗೊಂಡ 308 ರನ್ ಗಳಿಸಿ ಗಮನ ಸೆಳೆದರು. ಪಂತ್ ಸಾಹಸದ ನೆರವಿನಿಂದ ದಿಲ್ಲಿ ತಂಡ ಮಹಾರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 635 ರನ್ ಸನಿಹಕ್ಕೆ ತಲುಪಿತ್ತು.

ಪಂತ್ ಔಟಾದ ಬಳಿಕ ದಿಲ್ಲಿ 13 ರನ್‌ಗೆ ಕೊನೆಯ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಮೊದಲ ಇನಿಂಗ್ಸ್‌ನಲ್ಲಿ 590 ರನ್‌ಗೆ ಆಲೌಟಾಯಿತು. ಪಂದ್ಯ ಡ್ರಾಗೊಂಡ ಕಾರಣ ಮಹಾರಾಷ್ಟ್ರ 3 ಅಂಕ ಗಳಿಸಿತು. ಒಡಿಶಾಕ್ಕೆ ರೋಚಕ ಜಯ: ರಣಜಿಯ ಬಿ ಗುಂಪಿನ ಪಂದ್ಯದಲ್ಲಿ ಒಡಿಶಾ ತಂಡ ಸೌರಾಷ್ಟ್ರದ ವಿರುದ್ಧ 32 ರನ್‌ಗಳ ರೋಚಕ ಜಯ ಸಾಧಿಸಿದೆ. ಗೆಲ್ಲಲು 212 ರನ್ ಗುರಿ ಪಡೆದಿದ್ದ ಸೌರಾಷ್ಟ್ರ ಕೇವಲ 179 ರನ್‌ಗೆ ಆಲೌಟಾಯಿತು.

ತ್ರಿಪುರಾಕ್ಕೆ ಭರ್ಜರಿ ಗೆಲುವು: ಸರ್ವಿಸಸ್ ವಿರುದ್ಧ ತ್ರಿಪುರಾ 219 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿತು. ಗೆಲ್ಲಲು 383 ರನ್ ಗುರಿ ಪಡೆದಿದ್ದ ಸರ್ವಿಸಸ್ 163 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಎ ಗುಂಪಿನ ಪಂದ್ಯದಲ್ಲಿ ರೈಲ್ವೇಸ್‌ನ ವಿರುದ್ಧ ತಮಿಳುನಾಡು 174 ರನ್ ಗೆಲುವು ಸಾಧಿಸಿದೆ. ಗೆಲ್ಲಲು 401 ರನ್ ಕಠಿಣ ಗುರಿ ಪಡೆದಿದ್ದ ರೈಲ್ವೇಸ್ 226 ರನ್‌ಗೆ ಸರ್ವಪತನ ಕಂಡಿತು.

  ಪಂಜಾಬ್ ಹಾಗೂ ಹರ್ಯಾಣ ತಂಡಗಳು ಕ್ರಮವಾಗಿ ಎ ಹಾಗು ಸಿ ಗುಂಪಿನ ಪಂದ್ಯದಲ್ಲಿ ಜಯ ದಾಖಲಿಸಿವೆ. ಪಂಜಾಬ್ ತಂಡ ಮಧ್ಯಪ್ರದೇಶವನ್ನು 126 ರನ್‌ಗಳಿಂದ ಸೋಲಿಸಿದರೆ, ಹರ್ಯಾಣ ತಂಡ ಹೈದರಾಬಾದ್‌ನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News