ಯೋಗದಿಂದ ನೆಮ್ಮದಿಯ ಜೀವನ: ನಾರಾಯಣಸ್ವಾಮಿ

Update: 2016-10-16 18:34 GMT

ಉಡುಪಿ, ಅ.16: ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಯೋಗವು ಮನಸ್ಸು ಹಾಗೂ ದೇಹ ವನ್ನು ನಿಯಂತ್ರಿಸುವ ಅತ್ಯುತ್ತಮ ಸಾಧನವಾಗಿದೆ. ಎಲ್ಲ ರೀತಿಯ ಕಾಯಿಲೆ, ಖಿನ್ನತೆಗಳಿಂದ ಮುಕ್ತಿ ಹೊಂದಲು ಯೋಗ ಪರಿಣಾಮಕಾರಿಯಾಗಿದೆ. ಇದರಿಂದ ಬದುಕಿನಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ಪಾಂಡಿಚೇರಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಹೇಳಿದ್ದಾರೆ.
ಹೊಸದಿಲ್ಲಿ ಯೋಗಾ ಫೆಡರೇಷನ್ ಆಫ್ ಇಂಡಿಯಾ ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗಾ ಸ್ಪೋರ್ಟ್ಸ್ ಅಸೋಸಿಯೇಶನ್, ಎಸ್‌ಜಿಎಸ್ ಯೋಗಾ ಫೌಂಡೇಶನ್, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಗೂ ಉಡುಪಿ ಶ್ರೀಕೃಷ್ಣ ಮಠದ ಸಹಯೋಗದೊಂದಿಗೆ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ದಕ್ಷಿಣ ಭಾರತ ಮಟ್ಟದ ಯೋಗಾಸನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿಂದು ಭಾಗವಹಿಸಿ ಅವರು ಮಾತನಾಡಿದರು.
ಆಶೀರ್ವಚನ ನೀಡಿ ಮಾತನಾಡಿದ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ಮಕ್ಕಳಿಗೆ ಯೋಗದ ಬಗ್ಗೆ ಉತ್ಸಾಹ, ಸ್ಫೂರ್ತಿ ತುಂಬುವ ಕಾರ್ಯ ಮಾಡ ಬೇಕಾಗಿದೆ. ಯೋಗದಿಂದ ಮಕ್ಕಳು ತಮ್ಮ ದೇಹದ ಮೇಲೆ ನಿಯಂತ್ರಣ ಸ್ಥಾಪಿಸಿ ಮನಸ್ಸನ್ನು ನಿಯಂತ್ರಿ ಸಿಕೊಳ್ಳಬಹುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಮನೋಹರ್ ಶೆಟ್ಟಿ, ಉಡುಪಿ ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಮಾತನಾಡಿದರು. ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಗಂಗಾಧರಪ್ಪ, ಪ್ರಧಾನ ಕಾರ್ಯ ದರ್ಶಿ ಪ್ರೊ.ಎಂ.ಜಿ.ಅಮರನಾಥ್, ಯೋಗ ಫೆಡರೇಶನ್ ಆಫ್ ಇಂಡಿಯಾದ ಸಂಚಾಲಕ ಯೋಗಿರಾಜ್ ಎನ್.ರಾಮಲಿಂಗಂ, ದಕ್ಷಿಣ ವಲಯ ಕಾರ್ಯದರ್ಶಿ ಪ್ರಭು ಕೆ., ಡಾ.ಅಸಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸ್ಪರ್ಧಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಡಾ.ಎಂ.ನಿರಂಜನ ಮೂರ್ತಿ ಸ್ವಾಗತಿಸಿದರು. ಜಿ.ಎನ್.ಕೃಷ್ಣಮೂರ್ತಿ ಕಾರ್ಯಕ್ರಮ ನಿರೂ ಪಿಸಿದರು. ಸ್ಪರ್ಧೆಯಲ್ಲಿ ತಮಿಳುನಾಡು, ಪುದುಚೇರಿ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಅಂಡಮಾನ್ ನಿಕೋಬಾರ್, ಕರ್ನಾಟಕ ರಾಜ್ಯಗಳ 286 ಸ್ಪರ್ಧಾಳುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News