ವೋಟ್‌ಬ್ಯಾಂಕ್ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳಿಂದ ದೂರವಿರಿ: ರಘುಧರ್ಮ ಸೇನ

Update: 2016-10-18 11:32 GMT

ಮಂಗಳೂರು, ಅ. 18: ದಲಿತರಿಗೆ ನಕ್ಸಲ್ ಪಟ್ಟ, ಮುಸ್ಲಿಮರಿಗೆ ಭಯೋತ್ಪಾದಕರ ಪಟ್ಟ ಕಟ್ಟಿ ಸಮಾಜದಲ್ಲಿ ಭೀತಿಯ ವಾತಾವರಣವನ್ನು ಮೂಡಿಸಿ ಓಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿರುವ ರಾಜಕೀಯ ಪಕ್ಷಗಳಿಂದ ದೂರವಿರುವಂತೆ ಬಹುಜನ ಸಮಾಜ ಪಾರ್ಟಿಯ ನಾಯಕ ರಘುಧರ್ಮ ಸೇನ ಕರೆ ನೀಡಿದ್ದಾರೆ.

ಬಹುಜನ ಸಮಾಜ ಪಾರ್ಟಿ ದ.ಕ. ಜಿಲ್ಲೆ ವತಿಯಿಂದ ನಗರದ ಕರಾವಳಿ ಸಭಾಭವನದಲ್ಲಿ ನಡೆದ ‘ಹಿಂದುಳಿದ (ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡಿಗೆ ಬಿಎಸ್ಪಿ ಕಡೆಗೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಬಹುಸಂಖ್ಯಾತರ ಮತಗಳ ಮೇಲೆ ದೃಷ್ಟಿ ಹೊಂದಿರುವ ರಾಜಕೀಯ ಪಕ್ಷಗಳು ಅವರ ತುಷ್ಟೀಕರಣಕ್ಕಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಓಟ್‌ಗಾಗಿ ಮತದಾರರಿಗೆ ಆಮಿಷವೊಡ್ಡಿ ಹಣ, ಸಾರಾಯಿ, ಸೀರೆ ಹಂಚುವ ಮತ್ತು ಕೋಮು ಘರ್ಷಣೆಗಳನ್ನು ಹುಟ್ಟು ಹಾಕಿ ಕೊಳಕು ರಾಜಕಾರಣ ಮಾಡುವ ಬದಲು ಸಂವಿಧಾನಾತ್ಮಕವಾಗಿ ಮತ ಯಾಚಿಸುವ ಮೂಲಕ ತಮ್ಮ ನೈತಿಕತೆಯನ್ನು ಪ್ರದರ್ಶಿಸುವಂತೆ ಸವಾಲು ಹಾಕಿದ ರಘುಧರ್ಮ ಸೇನ, ಕಾನ್ಶಿರಾಂ ಮತ್ತು ಡಾ.ಅಂಬೇಡ್ಕರ್ ವಾದ-ಸಿದ್ಧಾಂತದ ಮೇಲೆ ಪಕ್ಷವನ್ನು ಕಟ್ಟಿ ಸಮಾಜವನ್ನು ಒಂದೂಗೂಡಿಸುವ ಕಾಯಕದಲ್ಲಿ ತೊಡಗಿರುವ ಬಹುಜನ ಸಮಾಜ ಪಕ್ಷವು ಓಟ್‌ಗಾಗಿ ಹಣ, ವಸ್ತುಗಳನ್ನು ಹಂಚದೆಯೇ ಮತ ಪಡೆಯುವ ನೈತಿಕತೆ ಇದೆ. ಇದನ್ನು ಪಕ್ಷ ಇತರ ರಾಜ್ಯಗಳಲ್ಲಿ ತೋರಿಸಿಕೊಟ್ಟಿದೆ ಎಂದರು.

ಚಿಂತಕ ಕಾನ್ಷಿರಾಂ ಅವರು ಸಮಾಜದ ಪುನರ್‌ನಿರ್ಮಾಣದ ಕೆಲಸ ಮಾಡಿದರು. ಡಾ.ಅಂಬೇಡ್ಕರ್ ಅಸ್ಪಶ್ಯತೆ ಮತ್ತು ಶೋಷಿತರ ಪರವಾಗಿ ಕೆಲಸ ಮಾಡಿದವರು. ಈ ಇಬ್ಬರೂ ನಾಯಕರು ದ್ವೇಷವನ್ನು ಕಟ್ಟಿಲ್ಲ. ಸಮಾಜ ವಿಂಗಡಣೆ ಮಾಡಿಲ್ಲ. ಇತ್ತೀಚೆಗೆ ಪ್ರಗತಿಪರ ಸಂಘಟನೆಗಳು ಉಡುಪಿಯಲ್ಲಿ ನಡೆಸಿದ ‘ಉಡುಪಿ ಚಲೊ’ ಚಳವಳಿಯಲ್ಲಿ ಆಹಾರ ಹಕ್ಕು, ಭೂಮಿಯ ಹಕ್ಕುಗಳನ್ನು ಕೇಳಿರುವುದು ಸರಿಯಾಗಿದೆ. ಆದರೆ, ಉಡುಪಿ ಮಠಕ್ಕೆ ಮುತ್ತಿಗೆ ಸರಿಯಲ್ಲ. ಅದು ಅಂಬೇಡ್ಕರ್ ವಾದವಲ್ಲ ಎಂದರು.

ಶೋಷಿತ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ಪ್ರವೇಶ ಅನಿವಾರ್ಯವಾಗಿದೆ. ಹೋರಾಟ ಮಾಡಿಯಾದರೂ ಅಧಿಕಾರ ಪಡೆಯುವಂತಾಗಬೇಕು. ಸಮಾಜದಲ್ಲಿ ಬಡತನ ನಿರ್ಮೂಲನೆಯಾಗಬೇಕು. ಶಿಕ್ಷಣ, ಉದ್ಯೋಗ ಸಮಾನವಾಗಿ ದೊರೆಯುವಂತಾಗಬೇಕು. ಕಾನ್ಷಿರಾಂ ಅವರು ನಡೆಸಿದ್ದ ಹೋರಾಟ ಉದ್ದಕ್ಕೂ ನೋವನ್ನು ಅನುಭವಿಸಿದ್ದರು. ಆ ಅನುಭವವೇ ಅವರಿಗೆ ಅಧಿಕಾರದ ಕಡೆಗೆ ಕೊಂಡೊಯ್ಯಿತು. ಅವರ ಮಾರ್ಗದರ್ಶನ ನಮಗೆ ಮಾದರಿಯಾಗಬೇಕು ಎಂದರು.

ಚುನಾವಣಾ ಅಕ್ರಮಕ್ಕೆ ಸರಕಾರಿ ನಿಧಿ ಸ್ಥಾಪನೆಯಾಗಲಿ

ಚುನಾವಣೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸರಕಾರಿ ನಿಧಿಯನ್ನು ಸ್ಥಾಪಿಸಬೇಕಾದ ಅಗತ್ಯವಿದೆ. ಇದರಲ್ಲಿ ಚುನಾವಣೆ ಸುಧಾರಣೆ ಜೊತೆಗೆ ಅಕ್ರಮಗಳನ್ನು ತಡೆಯಬಹುದು ಎಂದು ರಘುಧರ್ಮ ಸೇನ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಸ್ಪಿ ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು, ಚಿಂತಕ ಹಾಗೂ ವಕೀಲ ಮಹಾಬಲ ಎಂ., ಮಾಜಿ ಮಳವೂರು ಗ್ರಾ.ಪಂ.ಅಧ್ಯಕ್ಷ ಭಾಸ್ಕರ್ ಮಳವೂರು, ಬಿಎಸ್ಪಿ ಜಿಲ್ಲಾ ಸಂಯೋಜಕ ನಾರಾಯಣ ಭೋದ್, ಉಪಾಧ್ಯಕ್ಷ ಶಿವರಾಂ ಪೇಜಾವರ, ಪ್ರಧಾನ ಕಾರ್ಯದರ್ಶಿ ವಸಂತ ಕಕ್ಯಪದವು, ಖಜಾಂಜಿ ಶಶಿಕಲಾ ಎಂ., ಕರೀಂ ಪುತ್ತೂರು, ವಿನೋದ್ ಯದಪದವು, ಸುಂದರ್ ನಿಡ್ಪಳ್ಳಿ, ಶಿವಪ್ಪ ಗರ್ಗಾಡಿ, ವಿಠಲ್ ಸಿದ್ದಾರ್ಥ ನಗರ, ಗಣೇಶ್ ಕರೆಕಾಡ್, ಸುರೇಶ್ ಬಂಟ್ವಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News