ಟ್ವಿಟ್ಟರ್, ಫೇಸ್‌ಬುಕ್‌ನಿಂದ ಐಪಿಎಲ್ ಮಾಧ್ಯಮ ಹಕ್ಕುಗಳ ಟೆಂಡರ್ ಖರೀದಿ
ಹೊಸದಿಲ್ಲಿ, ಅ.18: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕುಗಳ(ಪ್ರಸಾರ, ಡಿಜಿಟಲ್ ಹಾಗೂ ಮೊಬೈಲ್) ಆಹ್ವಾನಿತ ಟೆಂಡರ್‌ಗಳನ್ನು(ಐಟಿಟಿ) ಪ್ರಮುಖ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ಫೇಸ್‌ಬುಕ್ ಸಹಿತ ಇತರ 18 ಕಂಪೆನಿಗಳು ಖರೀದಿಸಿವೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕು ಐಟಿಟಿಗೆ ಪ್ರಮುಖ ಮಾಧ್ಯಮ ಹಾಗೂ ತಂತ್ರಜ್ಞಾನ ಕಂಪೆನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐಟಿಟಿ ದಾಖಲೆಗಳು ಸೆ.19 ರಿಂದ ಅಕ್ಟೋಬರ್ 18,2016ರ ತನಕ ಲಭ್ಯವಿದ್ದವು ಎಂದು ಬಿಸಿಸಿಐ ತಿಳಿಸಿದೆ.
ಮಾಧ್ಯಮ ಹಕ್ಕುಗಳ ಪ್ರಸ್ತಾವದಲ್ಲಿ 2018ರಿಂದ 2027ರ(10 ಐಪಿಎಲ್ ಋತು)ತನಕ ಭಾರತದ ಉಪ ಖಂಡದ ಟಿವಿ ಹಕ್ಕುಗಳು, 2018ರಿಂದ 2027ರ ತನಕ ಭಾರತದ ಉಪಖಂಡದ ಡಿಜಿಟಲ್ ಹಕ್ಕುಗಳು(5 ಐಪಿಎಲ್ ಋತು) ಹಾಗೂ 2018 ರಿಂದ 2022ರ ತನಕ(5 ಐಪಿಎಲ್ ಋತು) ಶೇಷ ವಿಶ್ವದ ಹಕ್ಕುಗಳನ್ನು ನೀಡಲಾಗಿದೆ.
ಅಕ್ಟೋಬರ್ 25 ರಂದು ಮಾಧ್ಯಮ ಹಕ್ಕುಗಳ ಬಿಡ್ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.
‘‘ಇದೊಂದು ಭಾರತೀಯ ಕ್ರಿಕೆಟ್‌ಗೆ ಐತಿಹಾಸಿಕ ಕ್ಷಣವಾಗಿದೆ. ಐಪಿಎಲ್ ಮಾಧ್ಯಮ ಹಕ್ಕುಗಳಿಗೆ ಮಾಧ್ಯಮ ಹಾಗೂ ತಂತ್ರಜ್ಞಾನದಿಂದ ಲಭಿಸಿರುವ ಪ್ರತಿಕ್ರಿಯೆಯಿಂದ ನನಗೆ ತುಂಬಾ ಸಂತೋಷವಾಗಿದೆ’’ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.