×
Ad

ದ್ವಿತೀಯ ಏಕದಿನ: ಧೋನಿ ದೀರ್ಘ ಅಭ್ಯಾಸ

Update: 2016-10-18 23:56 IST

 ಹೊಸದಿಲ್ಲಿ, ಅ.18: ಎರಡನೆ ಏಕದಿನಕ್ಕೆ ತಯಾರಿ ನಡೆಸುತ್ತಿರುವ ನಾಯಕ ಎಂಎಸ್ ಧೋನಿ ಹೆಚ್ಚು ಸಮಯ ನೆಟ್‌ನಲ್ಲಿ ಕಳೆದರು. ವೇಗಿ ಧವಳ್ ಕುಲಕರ್ಣಿ ಎಸೆತವನ್ನು ಎದುರಿಸಿದ ಅವರು ಸ್ಪಿನ್ನರ್ ಜಯಂತ್ ಯಾದವ್ ವಿರುದ್ಧ 25 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ಜ್ವರದ ಕಾರಣಕ್ಕೆ ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಸುರೇಶ್ ರೈನಾ ಇದೀಗ ಚೇತರಿಸಿಕೊಳ್ಳುತ್ತಿದ್ದು, ನೆಟ್ ಪ್ರಾಕ್ಟೀಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ರೈನಾ ಬದಲಿಗೆ ಮೊದಲ ಏಕದಿನ ಪಂದ್ಯ ಆಡಿದ್ದ ಕೇದಾರ್ ಜಾಧವ್ ಪಾರ್ಟ್-ಟೈಮ್ ಆಫ್ ಬ್ರೇಕ್ ಬೌಲಿಂಗ್‌ನ ಮೂಲಕ ನ್ಯೂಝಿಲೆಂಡ್‌ನ 2 ವಿಕೆಟ್ ಉಡಾಯಿಸಿದ್ದರು.

ಗುರುವಾರ ಹೊಸದಿಲ್ಲಿಯಲ್ಲಿ ನಡೆಯಲಿರುವ 2ನೆ ಏಕದಿನದಲ್ಲಿ ಜಾಧವ್ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ನೆಟ್‌ಪ್ರಾಕ್ಟೀಸ್‌ನ ವೇಳೆ ಜಾಧವ್ ಬೌಲಿಂಗ್ ಅಭ್ಯಾಸ ನಡೆಸಿದರೆ, ರೈನಾ ಹಾಗೂ ಧೋನಿ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸಿದರು.

ನೆಟ್‌ನಲ್ಲಿ ಹೆಚ್ಚು ಅಭ್ಯಾಸ ನಡೆಸಿರುವ ಜಾಧವ್‌ಗೆ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹಾಗೂ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಸೂಕ್ತ ಸಲಹೆ ನೀಡಿದ್ದಾರೆ.

ಅಕ್ಷರ್ ಪಟೇಲ್, ಮನ್‌ದೀಪ್ ಸಿಂಗ್, ಕೇದಾರ್, ಕುಲಕರ್ಣಿ, ಜಯಂತ್ ನೆಟ್ ಪ್ರಾಕ್ಟೀಸ್‌ನಲ್ಲಿ ಪಾಲ್ಗೊಂಡರು. ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಜಸ್‌ಪ್ರಿತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಉಮೇಶ್ ಯಾದವ್ ವಿಶ್ರಾಂತಿ ಪಡೆಯಲು ನಿರ್ಧರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News