‘ ಲೈವ್ ಶೋ’ ಕುರಿತಾಗಿ ಒಂದು ‘ ಲೈವ್ ಚರ್ಚೆ’

Update: 2016-10-18 18:34 GMT

ಈ ಪ್ರಶ್ನೋತ್ತರಗಳನ್ನು ಪ್ರಕಟನೆಗೆ ಸಿದ್ಧಪಡಿಸುವಾಗ ಚಿಕ್ಕವರಿರುವಾಗ ಆಡುತ್ತಿದ್ದ ದಾರದಾಟ ನೆನಪಿಗೆ ಬಂತು. ‘‘ಸೂತ್ರ ಕ್ರೀಡಾ’’ ಎಂಬ (ಸು)ಸಂಸ್ಕೃತ ಹೆಸರೂ ಇರುವ ಇದರಲ್ಲಿ ಮಕ್ಕಳು, ಬೆರಳುಗಳಲ್ಲಿ ಹಿಡಿದ ದಾರದಿಂದ ಒಂದು ಸಾಮಾನ್ಯ, ಕಡಿಮೆ ಮಟ್ಟದ ವಿನ್ಯಾಸ ರಚಿಸಿದರೆ, ದೊಡ್ಡವರು (ಪರಿಣತರು) ಅದನ್ನು ತಮ್ಮ ಬೆರಳುಗಳಿಗೆ ವರ್ಗಾಯಿಸಿಕೊಳ್ಳುವಾಗ, ಮನೆ, ದೇವಾಲಯ, ಮಿನಾರ ಇತ್ಯಾದಿ ಸಂಕೀರ್ಣ ರೇಖಾ ವಿನ್ಯಾಸಗಳಾಗಿ ಬದಲಿಸಿ ತೋರಿಸುತ್ತಿದ್ದರು.

 ಕೆ.ವಿ. ತಿರುಮಲೇಶ್ ಸರ್ ಮಾಡಿರುವುದು ಅದನ್ನೇ. ಇನ್ನು ತಮ್ಮತಮ್ಮ ಬೆರಳುಗಳಲ್ಲಿ ನವನವೀನ ವಿನ್ಯಾಸಗಳನ್ನು ರಚಿಸುವ ಅವಕಾಶ ಓದುಗರಿಗೆ ಸದಾ ಇದ್ದೇ ಇದೆ. 

ಅವರವರ ಕಾರ್ಯಗಳಲ್ಲಿ ಪ್ರವೃತ್ತರಾದ ಜನಕ್ಕೆ ಅವರ ಬಿಡುಸಮಯದಲ್ಲಿ ಬೇಕಾದ್ದು ಮನರಂಜನೆ; ಅದನ್ನು ಕೊಡುವುದಕ್ಕೆ ಈ ದೃಶ್ಯಮಾಧ್ಯಮಗಳು ತಯಾರಾಗಿ ರುತ್ತವೆ-ಮನರಂಜನೆ ಎಷ್ಟೇ ಕಳಪೆಯಾಗಿದ್ದರೂ. ಆದ್ದರಿಂದಲೇ ಈ ಸೀರಿಯಲುಗಳು, ರಿಯಾಲಿಟಿ ಶೋಗಳು, ಅವಾರ್ಡ್ ಫಂಕ್ಷನುಗಳು, ಕಾಮಿಡಿ ಶೋಗಳು, ಸೆಲಿಬ್ರಿಟಿ ಟಾಕ್, ನ್ಯೂಸ್, ರೋಚಕ ಸುದ್ದಿಯ ಪ್ಯಾನೆಲ್ ಚರ್ಚೆಗಳು, ಕ್ರಿಕೆಟ್, ಟೆನಿಸ್ ಆಟಗಳ ಲೈವ್ ಟೆಲಿಕಾಸ್ಟ್ ಇತ್ಯಾದಿಗಳು ದೃಶ್ಯ ಮಾಧ್ಯಮಗಳಲ್ಲಿ ವಿಜೃಂಭಿಸುತ್ತವೆ. ಹೀಗಿರುತ್ತ ಬೌದ್ಧಿಕ ಕಾರ್ಯಕ್ರಮಗಳನ್ನು ನೋಡುವ ಜನ ಕಡಿಮೆ; ಯಾಕೆಂದರೆ ಅವು ನಮಗೆ ಮನರಂಜನೆ ಒದಗಿಸಲಾರವು. ಬೌದ್ಧಿಕ ವಿಷಯಗಳಲ್ಲಿ ಆಸಕ್ತಿ ಬರಬೇಕಾದರೆ, ಅದಕ್ಕೆ ತಕ್ಕ ಹಿನ್ನೆಲೆ ಬೇಕು. ವೈಚಾರಿಕ ವಿಷಯಗಳನ್ನು ಪ್ರಸಾರ ಮಾಡುವ ನ್ಯಾಶನಲ್ ಜಾಗ್ರಫಿ, ಎನಿಮಲ್ ಪ್ಲಾನೆಟ್, ಹಿಸ್ಟರಿ ಚ್ಯಾನೆಲ್‌ನಂಥ ಕೆಲವೇ ಕೆಲವು ವಾಹಿನಿಗಳಿವೆ. ಆದರೆ ಇವುಗಳ ಲಾಭ ಪಡೆದುಕೊಳ್ಳುವವರು ಎಷ್ಟು ಮಂದಿ ಇದ್ದಾರೋ ತಿಳಿಯದು.

ಒಟ್ಟಾರೆಯಾಗಿ ನೋಡಿದಾಗ, ವಿಜ್ಞಾನದಲ್ಲಿ ಆಸಕ್ತಿ ತೋರಿಸುವವರು ಸಂಖ್ಯೆಯಲ್ಲಿ ಕಡಿಮೆ. ಅದೇ ರೀತಿ, ತತ್ವಜ್ಞಾನ, ಭಾಷಾವಿಜ್ಞಾನ, ಭೂವಿಜ್ಞಾನ, ಅರ್ಥಶಾಸ್ತ್ರ ಇತ್ಯಾದಿ ವಿಷಯಗಳೂ ಕೆಲವೇ ಕೆಲವರನ್ನು ಅಕರ್ಷಿಸುತ್ತವಷ್ಟೆ. ಇಂಥ ಪರಂಪರೆಯೇ ಇಲ್ಲದಲ್ಲಿ ಇದನ್ನೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ನಿರೀಕ್ಷಿಸುವುದು ಹೇಗೆ? ಜನರಿಗೆ ಬೇಕಾದ್ದು ಸುಲಭ ಪ್ರಸಿದ್ಧಿ. ಅದಕ್ಕೆ ಮಾಧ್ಯಮಗಳು ರಂಗ ಒದಗಿಸಿಕೊಡುತ್ತವೆ. ಪತ್ರಿಕೆಯಲ್ಲಿ ಹೆಸರು ಬಂದರೆ ಅದು ದೊಡ್ಡ ವಿಷಯವಾಗುತ್ತದೆ; ಟಿವಿಯಲ್ಲಿ ಕಾಣಿಸಿಕೊಂಡರೆ ಇನ್ನಷ್ಟು ದೊಡ್ಡ ಸಂಗತಿ. ಇದೊಂದಕ್ಕೂ ಹೋಗದೆ ಕೇವಲ ತಮ್ಮ ಆಸಕ್ತಿಯ ಬೆನ್ನು ಹತ್ತುವವರನ್ನು ನೋಡಿ: ಆ ಫ್ಯಾಶನ್ ಭಾವುಕತೆಯಿಂದ ಬರುವುದಲ್ಲ, ಆಸಕ್ತಿಯಿಂದ ಬರುವಂಥದ್ದು. ಇಂಥ ಆಸಕ್ತಿಗೂ ಸರಿಯಾದ ಹಿನ್ನೆಲೆ ಬೇಕಾಗುತ್ತದೆ. ನೀವು ಸಿನೆಮಾ ಮಾಧ್ಯಮದ ಬಗ್ಗೆ ಹೇಳಿದಿರಿ, ಅದು ಯಾಕೆ ಬೌದ್ಧಿಕ ಸಾಧನೆಗೆ ಮನ್ನಣೆ ಕೊಡುವುದಿಲ್ಲ ಎಂದು ಅಚ್ಚರಿ ಗೊಳ್ಳುತ್ತೀರಿ. ನಾನು ಸಿನೆಮಾ ನೋಡುವುದೇ ಕಡಿಮೆ, ಕೆಲವು ವರ್ಷ ಗಳಿಂದ ನೋಡಿಯೇ ಇಲ್ಲ.

ಯಾಕೆಂದರೆ ಆ ದೃಶ್ಯಮಾಧ್ಯಮ ನನ್ನ ಮನಸ್ಸನ್ನು ಯೋಚನೆಗೆ ಹಚ್ಚುವುದಿಲ್ಲ. ಅದಕ್ಕಿಂತ ಹೆಚ್ಚು ನಾನು ಪುಸ್ತಕ ಓದಲು ಇಷ್ಟಪಡುವವ. ಆದರೂ ಜಾನ್ ನಾಶ್ ಎಂಬ ಗಣಿತ ಅರ್ಥಶಾಸ್ತ್ರಜ್ಞನ ಕುರಿತು ಬಂದ ಅA Beautiful Mind  ಎಂಬ ಸಿನೆಮಾ ನೋಡಿ ಮೆಚ್ಚಿಕೊಂಡಿದ್ದೇನೆ. ಶ್ರೀನಿವಾಸ ರಾಮಾನುಜನ್ ಬಗ್ಗೆ The Man Who Knew Infinity ಎಂಬ ಸಿನೆಮಾ ಬಂದಿದೆಯೆಂದು ಕೇಳಿದ್ದೇನೆ. ನಾನು ನೋಡಿಲ್ಲ. ಇದು ಸ್ವಾಗತಾರ್ಹ. ಆದರೂ ನಮ್ಮ ಸಿನೆಮಾ ಮನರಂಜನೆ ಜತೆ ರಾಜಿಮಾಡಿಕೊಳ್ಳದೆ ತೆರೆಗೆ ಬರುವುದು ಕಷ್ಟಸಾಧ್ಯ.

8. ಬೌದ್ಧಿಕ/ ಭಾವನಾತ್ಮಕ ಎರಡೂ ಬಗೆಯ ಆಲೋಚನೆಗಳು-್ಛ felt thought& thought out emotion  ಭಾಷಾರಹಿತವಾಗಿ ಇರಬಲ್ಲ ವಾದರೂ-ಉದಾಹರಣೆಗೆ ಚಿತ್ರಕಲೆ, ಸಂಗೀತ ಸೃಷ್ಟಿಸುವಾಗ/ ಆಸ್ವಾದಿಸುವಾಗ ಆಗುವಂತೆ- ಸಂವಹನಕ್ಕಾಗಿ ಅವುಗಳಿಗೆ ಶಬ್ದ ರೂಪ ಕೊಡುವುದು ಅನಿವಾರ್ಯ. ಶ್ರೇಷ್ಠ ಕಾವ್ಯದಲ್ಲಿ ಅವು, ಅಕ್ಷರ ರೂಪಕ್ಕಿಳಿದೂ ಅಪ್ಪಟವಾಗಿ ಇರಬಲ್ಲವೇನೋ. ಉಳಿದಂತೆ, ಭಾಷೆ ಗಿಳಿದಾಗ ಭ್ರಷ್ಟವಾಗಿಬಿಡುವ ಸಾಧ್ಯತೆ, ಭಾವನಾತ್ಮಕ ತಿರುಚುವಿಕೆಗೆ-emotional manipulation  ವಾಹಕವಾಗುವುದು ಇದ್ದೇ ಇದೆ. ಈ ದಿಕ್ಕಿನಲ್ಲಿ ಯೋಚಿಸಿದಾಗ, ಅವನ್ನು ಶುದ್ಧವಾಗಿ/ ಪ್ರಾಮಾಣಿಕವಾಗಿ ಇಡುವ ಏಕೈಕ ವಿಧಾನವೆಂದರೆ ಬೇಕಾದಷ್ಟು ಮಾತ್ರ ಶಬ್ದಗಳಲ್ಲಿ ಅವನ್ನು ಇಡುವುದು ಅಥವಾ ಮಾತಿಗಿಂತ ತತ್ಸಂಬಂಧಿತ ಕೆಲಸಕ್ಕೆ ಮುಂದಾಗುವುದು. ಎದುರಿಗೆ ಕಾಣುತ್ತಿರುವ ಭಾವನೆಗಳ ಪ್ರದರ್ಶನದಲ್ಲಿ ಯಾವುದು ಸಹಜ, ಯಾವುದು ಕೃತಕ, ಅಥವಾ ಎಷ್ಟರಮಟ್ಟಿಗೆ ಸಹಜ ಇಲ್ಲವೇ ಕೃತಕ ಎಂದು ವಿಶ್ಲೇಷಿಸಿಕೊಳ್ಳುವ ವೈಯಕ್ತಿಕ ಸಾಮರ್ಥ್ಯ ಇರುತ್ತದಾದರೂ, ಒಟ್ಟು ಸಮುದಾಯದಲ್ಲಿ ಈ ಕುರಿತು ಅರಿವು ಮೂಡಿಸುವ ಕುರಿತಂತೆ...

ಭಾಷೆ ಎನ್ನುವುದು ಮನುಷ್ಯನ ಒಂದು ಬಹು ದೊಡ್ಡ ಸಂಪತ್ತು. ಅಂತೆಯೇ ಅದೊಂದು ಮಿತಿ ಕೂಡ.“The limits of my language mean the limits of my world”  ಎಂಬ ವಿಟ್‌ಗೆನ್‌ಸ್ಟೈನ್‌ನ ಮಾತನ್ನು ನೀವು ಕೇಳಿರುತ್ತೀರಿ. ಈ ಲಿಮಿಟ್ಸ್‌ನಿಂದ ಹಲವರಿಗೆ ಕಸಿವಿಸಿ ಕೂಡ ಆಗುತ್ತದೆ.“I am afraid we are not rid of God because we still have faith in grammar” ಎಂಬ ನೀತ್ಸೆಯ ಮಾತಿನ ಅರ್ಥ ಕರ್ತೃಪದ, ಕ್ರಿಯಾಪದ ಇತ್ಯಾದಿ ವ್ಯಾಕರಣ ವಿನ್ಯಾಸಕ್ಕೆ ಸಂಬಂಧಿಸಿದ್ದು; ಭಾಷೆ ಕರ್ತೃವನ್ನು ಕಲ್ಪಿಸುತ್ತದೆ; ಅದಿಲ್ಲದೆ ವಾಕ್ಯವಿಲ್ಲ. ಸಾಂಕೇತಿಕವಾಗಿ ಅದು ದೇವರನ್ನು ಪ್ರತಿನಿಧಿಸುವಂತಿದೆ. ದೇವರು ಸತ್ತ ಎಂದ ನೀತ್ಸೆಯೇ ಈ ಮಾತನ್ನೂ ಹೇಳಿದ್ದು. ಭಾಷೆಯ ಸ್ವಾಯತ್ತತೆಯನ್ನು ಅವನು ಮನಗಂಡಿದ್ದ. ಇನ್ನು ಭಾಷೆಗಳಲ್ಲೂ ತಮ್ಮಾಳಗೆ ವ್ಯತ್ಯಾಸಗಳಿವೆ: ಅನುವಾದಕ್ಕಿಳಿದಾಗ ನಮಗಿದು ಗೊತ್ತಾಗುತ್ತದೆ. ಆದರೆ ಆಚಿಛ್ಝಿ
ನಿಂದ ಶಪಿತರಾದ ನಾವು ಅನುವಾದಕ್ಕೂ ವಿಧಿತರು. ನಮ್ಮ ಮಾತು ಒಂದೇ ಭಾಷೆಯಲ್ಲಿ ಕೂಡ ಪರಸ್ಪರ ಸಂಪೂರ್ಣ ಅರ್ಥವಾಯಿತು ಎನ್ನಲಾರೆವು; ಇನ್ನು ಮನಸ್ಸಿನ ಯೋಚನೆಗಳನ್ನು ಇದ್ದಂತೆಯೇ ಸಂವಹನಗೊಳಿಸುವುದು ಅಸಾಧ್ಯವೇ ಸರಿ.

ವಾಸ್ತವದಲ್ಲಿ ಭಾಷೆಯ ಮಾಧ್ಯಮವಿಲ್ಲದೆ ನಾವು ಏನು ಯೋಚಿಸುತ್ತೇವೆ ಎನ್ನುವುದು ಕೂಡ ನಮಗೆ ಅರಿವಿಗೆ ಬರುವುದು ಕಷ್ಟ. ಯೋಚನೆ ಭಾಷೆಯ ಹಾಗೆ ಇಲ್ಲ ಎನ್ನಬಹುದು; ಆದರೆ ಯಾವ ರೀತಿಯಲ್ಲಿ ಎಂದು ಸ್ಪಷ್ಟ ಪಡಿಸುವುದು ಸಮಸ್ಯೆಯಾಗುತ್ತದೆ. ಯೋಚನೆ ಒಂದು ಪದದ ನಂತರ ಇನ್ನೊಂದು ಪದ ಇರಿಸಿದಂತೆ ಸರಪಣಿಯಾಗಿ ಬರುವುದಿಲ್ಲ ಎನ್ನಬಹುದು. ‘‘ದನ ಹುಲ್ಲು ಮೇಯುತ್ತಿದೆ’’ ಎಂಬ ವಾಕ್ಯ ಜೋಡಿಸಲ್ಪಟ್ಟ ಹಾಗೆ ಅದಕ್ಕೆ ಸಂಬಂಧಿಸಿದ ಯೋಚನೆ ಇರಲಾರದು. ಭಾಷೆ ಹೆಚ್ಚು ಎನಲೆಟಿಕ್, ಯೋಚನೆ ಹೆಚ್ಚು ಸಿಂಥೆಟಿಕ್. ಯೋಚನೆಗಳು ಯಾವುದಾದರೂ ಮಾಧ್ಯಮದ ವಿನಾ ‘‘ಅಪ್ಪಟ’’ವಾಗಿ ಸಂವಹನಗೊಳ್ಳಲಾರವು. ಇಂಥ ಮಾಧ್ಯಮಗಳಲ್ಲಿ ಭಾಷೆಯೊಂದೇ ಅತ್ಯಂತ ಶಕ್ತಿಯುತವಾದುದು; ಹಾಗಿದ್ದೂ ಅದು ಪಾರದರ್ಶಕವಲ್ಲ. ಭಾಷೆ ಕೇವಲ ಕ್ರಿಯೆಗೆ ಇರುವ ಸಾಧನವೂ ಅಲ್ಲ. ಯೋಚನೆಗೂ ಅದು ಸಹಾಯ ಮಾಡುತ್ತದೆ. ಮಾತು ಯೋಚನೆಯನ್ನು ಪ್ರತಿನಿಧಿಸುತ್ತದೆ, ಹಾಗೆಯೇ ಯೋಚನೆಯನ್ನು ಆಗುಗೊಳಿಸುತ್ತದೆ. ನಮ್ಮ ‘‘ಸಂದರ್ಭಮುಕ್ತತೆ’’ಗೆ ಭಾಷೆ ಬಹಳ ಸಹಕಾರಿ. ಆದರೂ ಹಲವು ಲೇಖಕರು ಭಾಷೆಯ ಮಿತಿಯನ್ನು ದಾಟಲು ಶ್ರಮಿಸಿದ್ದಾರೆ: ಉದಾಹರಣೆಗೆ ಜೇಮ್ಸ್ ಜಾಯ್ಸ್ಸ್, ಅವನ ಅಭಿಮಾನಿಯಾಗಿದ್ದ ಸಾಮ್ಯುವೆಲ್ ಬೆಕೆಟ್. ಬೆಕೆಟ್‌ನ ‘‘ವೈಟಿಂಗ್ ಫಾರ್ ಗೋಡೋ’’ ನಾಟಕದಲ್ಲಿ ಪೋಜೋ ಎಂಬ ಯಜಮಾನ ತನ್ನ ಜೀತದಾಳು ಲಕ್ಕಿಗೆ ‘‘ಯೋಚಿಸು!’’ (Think!) 
 ಎಂದು ಆಜ್ಞಾಪಿಸಿದೊಡನೆ ಲಕ್ಕಿ ಬಡಬಡಿಸುವ ಒಂದು ಸನ್ನಿವೇಶವಿದೆ. ಇದು ಬಹುಶಃ ಯೋಚನೆಗೆ ಹೆಚ್ಚು ಹತ್ತಿರವಿರಬಹುದೆಂದು ತೋರುತ್ತದೆ.

ಲಕ್ಕಿಯ ಬಡಬಡಿಕೆ ಅರ್ಥವಾಗಲು ಕಷ್ಟವಿದೆ, ಯಾಕೆಂದರೆ ಅದು ಸಾಮಾನ್ಯ ಮಾತಿನಂತೆ ಇಲ್ಲ. ನಿಜ ಹೇಳಲೇ? ಇಲ್ಲಿ ನಿಮ್ಮ ಮಾತುಗಳು ಕೂಡ ಅದೇ ರೀತಿ, ಯೋಚನೆಯನ್ನು ಇದ್ದುದಿದ್ದಂತೆ ಹೊರಗೆಡಹುವ ಹಾಗೆ ನನಗೆ ಅನಿಸುತ್ತದೆ: ಅವು ಸಿದ್ಧ ಯೋಚನೆಗಳನ್ನು ನೀಡದೆ ಯೋಚಿಸುವ ಕ್ರಿಯೆಯನ್ನು ಪ್ರಕಟಪಡಿಸುತ್ತವೆ! ಇನ್ನು ಭಾಷೆಯ ಭ್ರಷ್ಟತೆಯ ಬಗ್ಗೆ ಜಾರ್ಜ್ ಆರ್ವೆಲ್ 1949ರಷ್ಟು ಹಿಂದೆಯೇ ತನ್ನ Nineteen Eighty-four ಎಂಬ ಕಾದಂಬರಿಯಲ್ಲಿ ಬರೆದಿದ್ದಾನೆ; ಅಂಥ ಭ್ರಷ್ಟ ನುಡಿಯನ್ನು ಅವನು ’ಘೆಛಿಡಿಛಿೞಎಂದು ಕರೆದ. ಅದು ಪೊಲಿಟಿಕಲ್ ಕರೆಕ್ಟ್ ನೆಸ್‌ಗೆ ಇನ್ನೊಂದು ಹೆಸರು--ಪೊಲಿಟಿಕಲ್ ಕರೆಕ್ಟ್‌ನೆಸ್ ಹೆಚ್ಚಾಗಿ ಅಪ್ರಮಾಣಿಕವಾಗಿರುತ್ತದೆ. ಪತ್ರಿಕಾ ನುಡಿಗಟ್ಟುಗಳು ಹೆಚ್ಚಾದಂತೆ ನ್ಯೂಸ್‌ಸ್ಪೀಕ್ ಸಹ ಹೆಚ್ಚಾಗುತ್ತ ಇದೆ. ಅರೆಬರೆ ಬುದ್ಧಿಜೀವಿಗಳು ಥಟ್ಟನೆ ಹಾರಿ ಅವುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಜನರನ್ನು ಮಂಕು ಮರುಳು ಮಾಡುವುದಕ್ಕೆ. ಜನ ಅವುಗಳಲ್ಲೇನೋ ತಮಗೆ ಇದುತನಕ ಗೊತ್ತಿಲ್ಲದ್ದು ಇದೆಯೆಂದು ಭ್ರಮಿಸುತ್ತಾರೆ. ಮೆಸ್ಮರೈಸ್ಡ್ ಆಗಿಬಿಡುತ್ತಾರೆ. ತಲೆದೂಗುತ್ತಾರೆ. ಕೆಲವರು ತಾವೇ ಅಂಥ ಭಾಷೆಯನ್ನು ಉಪಯೋಗಿಸಲೂಬಹುದು. ಇದಕ್ಕೆ ಉತ್ತರವೇನು? ನಾವು ಅದಕ್ಕೆ ಮರುಳಾಗದೆ ಇರುವುದು. ಆದಷ್ಟೂ ಮಟ್ಟಿಗೆ ಋಜುತ್ವದ ಭಾಷೆಯನ್ನು ಬಳಸುವುದು. ಭಾಷೆ ಯೋಚನೆಯನ್ನು ಬೆಳೆಸಬೇಕೇ ಹೊರತು ಅದನ್ನು ತಡೆಗಟ್ಟಬಾರದು. ಆದರೆ ಇದು ಅಷ್ಟು ಸುಲಭವೂ ಅಲ್ಲ, ಯಾಕೆಂದರೆ ಈ ನುಡಿಗಟ್ಟುಗಳ ಹೊರತಾಗಿ ಈಗ ಮಾತಾಡುವುದೇ ಕಷ್ಟವಾಗಿದೆ. ಇಲ್ಲಿ ನಾವು ಬಳಸುತ್ತಿರುವ ಭಾಷೆ ಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಗಮನಕ್ಕೆ ಬಂದೀತು. ಹಲವು ಸಲ ನಾವು ‘ಎದುರಾಳಿ’ಯನ್ನು ಸೋಲಿಸುವುದಕ್ಕೆಂದು, ಯಾರನ್ನೋ ಒತ್ತಾಯಿಸುವುದಕ್ಕೆಂದು ಮಾತಾಡುತ್ತೇವೆಯೇ ವಿನಾ ಬೇರೆ ಕಾರಣಕ್ಕೆ ಅಲ್ಲ. ಆಗ ಮಾತೊಂದು ವರಸೆಯಾಗುತ್ತದೆ. ಅದೂ ಭ್ರಷ್ಟತೆಯೇ.
“The Second Coming”®ÜÈÉ: 
The best lack all conviction, while the worst   
Are full of passionate intensity.. ಎಂಬ ಯೇಟ್ಸ್‌ನ ಸಾಲುಗಳು ಈ ಕಾಲದಲ್ಲಿ ನೆನಪಾಗುತ್ತವೆ: passionate intensityಇದ್ದವರೇ ನಮಗೆ ಕೇಳಿಸುವುದು, ಉತ್ತಮರು ಕೇಳಿಸುವುದಿಲ್ಲ, ಯಾಕೆಂದರೆ ಅವರು ಖಂಡತುಂಡವಾಗಿ ಮಾತಾಡಲಾರರು, ಅವರಿಗೆ ಯಾವತ್ತೂ ಸ್ವಾನುಮಾನವಿರುತ್ತದೆ.

(ಮುಂದುವರಿಯುವುದು)

Writer - ವೆಂಕಟಲಕ್ಷ್ಮೀ ವಿ.ಎನ್.

contributor

Editor - ವೆಂಕಟಲಕ್ಷ್ಮೀ ವಿ.ಎನ್.

contributor

Similar News