ಅಕ್ರಮ ಮದ್ಯಸಾಗಾಟ ಪ್ರಕರಣದ ಆರೋಪಿ 13 ವರ್ಷಗಳ ಬಳಿಕ ಬಂಧನ

Update: 2016-10-19 13:27 GMT

ಪುತ್ತೂರು, ಅ.19: ಹದಿಮೂರು ವರ್ಷಗಳ ಹಿಂದೆ ಪತ್ತೆಯಾಗಿದ್ದ ಅಕ್ರಮ ಮದ್ಯ ಸಾಗಾಟ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪುತ್ತೂರು ನಗರ ಪೊಲೀಸರು ಇದೀಗ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತೂರು ತಾಲೂಕಿನ ಆರ್ಯಾಪು ನಿವಾಸಿ ಚಂದಪ್ಪ ಯಾನೆ ಚೆನ್ನಪ್ಪ ಗೌಡ ಬಂಧಿತ ಆರೋಪಿ.

ಪುತ್ತೂರು ನಗರದ ಹೊರವಲಯದಲ್ಲಿ 2003ರ ಡಿಸೆಂಬರ್ 13ರಂದು ಆಗಿನ ಅಬಕಾರಿ ಉಪನಿರೀಕ್ಷಕಿ ಸವಿತಾರ ನೇತೃತ್ವದಲ್ಲಿ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಉಮೇಶ್ ಮತ್ತು ಚಂದಪ್ಪಯಾನೆ ಚೆನ್ನಪ್ಪ ಗೌಡ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಾಂಡ್ ಮೂಲಕ ಹೊರಬಂದ ಆರೋಪಿಗಳ ಪೈಕಿ ಉಮೇಶ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಆತನನ್ನು ಆರೋಪದಿಂದ ಮುಕ್ತಗೊಳಿಸಿತ್ತು.

ಆದರೆ ಚಂದಪ್ಪ ಯಾನೆ ಚೆನ್ನಪ್ಪಗೌಡ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು. ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಠಾಣೆಯ ಪೊಲೀಸರು ಆರೋಪಿ ಚಂದಪ್ಪಯಾನೆ ಚೆನ್ನಪ್ಪ ಗೌಡನನ್ನು ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಪುಬೈಪಾಸ್ ಬಳಿ ಪತ್ತೆ ಮಾಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ಶರ್ತಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೆಸರು ಬದಲಾವಣೆ

ಪುತ್ತೂರು ನಗರ ಪೊಲೀಸರು ಆರೋಪಿ ಚಂದಪ್ಪ ಯಾನೆ ಚೆನ್ನಪ್ಪ ಗೌಡನನ್ನು ಮಂಜಲ್ಪಡ್ಪು ಬೈಪಾಸ್ ಬಳಿ ಪತ್ತೆ ಮಾಡಿ ವಿಚಾರಿಸಿದಾಗ ಆತ ತನ್ನ ಹೆಸರನ್ನು ಜಾರಪ್ಪಎಂದು ತಿಳಿಸಿದ್ದ. ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಬಳಿಕ ಆತ ಹೋದೆಡೆಯಲ್ಲೆಲ್ಲಾ ತನ್ನ ಹೆಸರನ್ನು ಜಾರಪ್ಪ ಎಂದು ಪರಿಚಯಿಸಿಕೊಳ್ಳುತ್ತಿದ್ದ ಎಂಬ ಮಾಹಿತಿ ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News