×
Ad

ಶಾಲೆಯಲ್ಲಿ ಕ್ರಿಮಿನಲ್‌ನ ಮಕ್ಕಳಿಂದ ದಲಿತ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ

Update: 2016-10-19 19:05 IST

ಮುಝಾಫರ್‌ಪುರ (ಬಿಹಾರ),ಅ.19: ಇಲ್ಲಿನ ಶಾಲೆಯೊಂದರಲ್ಲಿ ಕೊಲೆ ಆರೋಪಿಯೊಬ್ಬನ ಇಬ್ಬರು ಪುತ್ರರು, ತಮ್ಮ ದಲಿತ ಸಹಪಾಠಿಯೊಬ್ಬನನ್ನು ನಿರ್ದಯವಾಗಿ ಥಳಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿರುವಂತೆಯೇ, ಈ ಇಬ್ಬರೂ ಅಪ್ರಾಪ್ತ ವಯಸ್ಕರನ್ನು ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ. ಥಳಿತಕ್ಕೊಳಗಾದ ದಲಿತ ಬಾಲಕನ ಕುಟುಂಬಕ್ಕೆ ಈಗ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಹಲ್ಲೆಗೊಳಗಾದ ದಲಿತ ಬಾಲಕನು ಇಲ್ಲಿನ ಗಾನ್ನಿಪುರ್ ಕೇಂದ್ರೀಯ ವಿದ್ಯಾಲಯದ 12ನೆ ತರಗತಿ ವಿದ್ಯಾರ್ಥಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆತನ ತಾತ ಸ್ಥಳೀಯ ಪರಿಶಿಷ್ಟ ಸಮುದಾಯಗಳಿಗಾಗಿನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ತನ್ನ ಮೊಮ್ಮಗನ ಮೇಲೆ ಹಲ್ಲೆ ನಡೆಸಿದ ಇಬ್ಬರು ಸಹೋದರರ ತಂದೆಯು, ಕುಖ್ಯಾತ ಕ್ರಿಮಿನಲ್ ಹಾಗೂ ಕೊಲೆ ಪ್ರಕರಣವೊಂರಲ್ಲಿ ಜೈಲು ಸೇರಿದ್ದು, ಆತನ ಕಡೆಯವರಿಂದ ತಮ್ಮ ಕುಟುಂಬದವರ ಪ್ರಾಣಕ್ಕೆ ಅಪಾಯವಿದೆಯೆಂದು ದಲಿತ ಬಾಲಕರ ತಾತ ದೂರಿನಲ್ಲಿ ತಿಳಿಸಿದ್ದಾರೆ.

ದಲಿತ ಬಾಲಕನನ್ನು ಥಳಿಸಿದ ಇಬ್ಬರು ಸಹೋದರರನ್ನು ಮಂಗಳವಾರ ಬಾಲನ್ಯಾಯಾಲಯ ಮಂಡಳಿಯ ಮುಂದೆ ಹಾಜರುಪಡಿಸಿದ ಬಳಿಕ ರಿಮಾಂಡ್ ಹೋಂಗೆ ಕಳುಹಿಸಲಾಯಿತು. ಶಾಲೆಯಿಂದಲೂ ಅವರನ್ನು ವಜಾಗೊಳಿಸಲಾಗಿದೆಯೆಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿ ಶಾಲಾ ಪ್ರಾಂಶುಪಾಲ ರಾಜೀವ್ ರಂಜನ್, ಖಾಝಿ ಮುಹಮ್ಮದ್‌ಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ ಈ ಇಬ್ಬರು ಸಹೋದರರು ಜೂನ್ 25ರಂದು ಶಾಲೆಯಲ್ಲಿ ಇತರ ಕೆಲವು ಶಾಲಾ ವಿದ್ಯಾರ್ಥಿಗಳ ಸಮಕ್ಷಮದಲ್ಲೇ ದಲಿತ ಬಾಲಕನನ್ನು ದೂಡುತ್ತಿರುವ ಹಾಗೂ ಹಿಗ್ಗಾಮಗ್ಗಾ ಥಳಿಸುತ್ತಿರುವುದನ್ನು ತೋರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News