ಅಸಾಂಜ್‌ರ ಇಂಟರ್‌ನೆಟ್ ಸ್ಥಗಿತ: ಇಕ್ವೆಡಾರ್
Update: 2016-10-19 19:23 IST
ಕ್ವಿಟೊ (ಇಕ್ವೆಡಾರ್), ಅ. 19: ತನ್ನ ಲಂಡನ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿರುವ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರಿಗೆ ಒದಗಿಸಲಾಗಿರುವ ಇಂಟರ್‌ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಇಕ್ವೆಡಾರ್ ಮಂಗಳವಾರ ತಿಳಿಸಿದೆ.
ಅಮೆರಿಕದ ಚುನಾವಣೆಯ ಮೇಲೆ ಪರಿಣಾಮ ಬೀರಬಲ್ಲ ಮಾಹಿತಿಗಳನ್ನು ವಿಕಿಲೀಕ್ಸ್ ಸೋರಿಕೆ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
‘‘ಇದರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಬಾರದು ಎನ್ನುವ ತತ್ವವನ್ನು ಇಕ್ವೆಡಾರ್ ಸರಕಾರ ಗೌರವಿಸುತ್ತದೆ. ಬಾಹ್ಯ ಚುನಾವಣಾ ಪ್ರಕ್ರಿಯೆಗಳಲ್ಲಿ ಅದು ಹಸ್ತಕ್ಷೇಪ ನಡೆಸುವುದಿಲ್ಲ ಹಾಗೂ ಯಾವುದೇ ನಿರ್ದಿಷ್ಟ ಅಭ್ಯರ್ಥಿಯ ಪರವಾಗಿ ಅದಕ್ಕೆ ಒಲವೂ ಇಲ್ಲ’’ ಎಂದು ಇಕ್ವೆಡಾರ್ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರ ಪ್ರಚಾರ ತಂಡದ ಇತ್ತೀಚಿನ ವಾರಗಳ ಹಲವಾರು ಇಮೇಲ್‌ಗಳನ್ನು ವಿಕಿಲೀಕ್ಸ್ ಪ್ರಕಟಿಸಿರುವುದನ್ನು ಸ್ಮರಿಸಬಹುದಾಗಿದೆ.