ಕರ್ನಾಟಕಕ್ಕೆ ಸಮಾಧಾನ ತಂದ ತೀರ್ಪು
ಹೈದರಾಬಾದ್, ಅ.19: ಕೃಷ್ಣ ನದಿ ನೀರನ್ನು ಮರುಹಂಚಿಕೆ ಮಾಡುವ ಅಗತ್ಯವಿಲ್ಲ ಎಂದು ಕೃಷ್ಣ ನೀರು ವಿವಾದ ನ್ಯಾಯಮಂಡಳಿ ತಿಳಿಸಿದ್ದು ಈ ತೀರ್ಪು ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ಸಮಾಧಾನ ತಂದಿದೆ. ಇನ್ನೊಂದೆಡೆ ಕೃಷ್ಣಾ ನದಿ ನೀರಿನಲ್ಲಿ ತಮಗೆ ಹೆಚ್ಚಿನ ಪಾಲು ಬೇಕೆಂದು ಹಠ ಹಿಡಿದಿದ್ದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಗೆ ತೀವ್ರ ಹಿನ್ನಡೆಯಾಗಿದೆ. ಅವಿಭಜಿತ ಆಂಧ್ರಪ್ರದೇಶದ ಎರಡು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಗಳಿಗೆ ಕೃಷ್ಣ ನದಿ ನೀರಿನ ಹಂಚಿಕೆಯನ್ನು ಮರು ನಿಗದಿಗೊಳಿಸುವಂತೆ ನ್ಯಾಯಮಂಡಳಿ ತೀರ್ಪಿನಲ್ಲಿ ತಿಳಿಸಿದೆ. ಈ ಕುರಿತು ಆಕ್ಷೇಪಗಳಿದ್ದರೆ ನಾಲ್ಕು ವಾರಗಳೊಳಗೆ ಸಲ್ಲಿಸುವಂತೆ ನ್ಯಾಯಮಂಡಳಿ ಈ ಎರಡು ರಾಜ್ಯಗಳಿಗೆ ತಿಳಿಸಿ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ. ನ್ಯಾಯಮಂಡಳಿಯ ತೀರ್ಪು ಅಂತಿಮವಲ್ಲ ಎಂದಿರುವ ತೆಲಂಗಾಣದ ಅಡ್ವೊಕೇಟ್ ಜನರಲ್ ರಾಮಕೃಷ್ಣ ರೆಡ್ಡಿ, ಇದು ಸುಪ್ರೀಂಕೋರ್ಟ್‌ನ ಪರಾಮರ್ಶೆಗೆ ಒಳಗೊಂಡಿದೆ ಎಂದಿದ್ದಾರೆ. ಆಂಧ್ರಪ್ರದೇಶ ಮರುರಚನೆ ಕಾಯ್ದೆ 2014ರ ಪ್ರಕಾರ ಕೃಷ್ಣಾ ನದಿ ನೀರಿನ ಹಂಚಿಕೆಯನ್ನು ನಾಲ್ಕು ರಾಜ್ಯಗಳ ನಡುವೆ ಪುನರ್ ನಿಗದಿಗೊಳಿಸಬೇಕು ಎಂದು ಕೋರಿ ನ್ಯಾಯಮಂಡಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದನ್ನು ನ್ಯಾಯಮಂಡಳಿ ತಿರಸ್ಕರಿಸಿದೆ. ಇನ್ನೊಂದೆಡೆ ಆಂಧ್ರಪ್ರದೇಶ ಮರುರಚನೆ ಕಾಯ್ದೆ 2014 ಆಂದ್ರದ ಎರಡು ರಾಜ್ಯಗಳಿಗೆ ಮಾತ್ರ ಸೀಮಿತವಾಗಿದ್ದು ತಾವು ಇದರ ವ್ಯಾಪ್ತಿಯಲ್ಲಿಲ್ಲ ಎಂದು ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ತಿಳಿಸಿದ್ದವು. 2013ರಲ್ಲಿ ನ್ಯಾಯಮಂಡಳಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಅವಿಭಜಿತ ಆಂಧ್ರಪ್ರದೇಶಗಳಿಗೆ ನದಿ ನೀರು ಹಂಚಿಕೆ ಮಾಡಿತ್ತು. ಆದರೆ ತೆಲಂಗಾಣ ರಾಜ್ಯದ ರಚನೆಯಾದ ಬಳಿಕ ತನಗೆ ಅನ್ಯಾಯವಾಗಿದೆ ಎಂದು ಆಂಧ್ರಪ್ರದೇಶ ನ್ಯಾಯಮಂಡಳಿಗೆ ಮನವಿ ಸಲ್ಲಿಸಿತ್ತು.
ಅವಿಭಜಿತ ಆಂಧ್ರಪ್ರದೇಶಕ್ಕೆ 811 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದ್ದು ತೆಲಂಗಾಣ ಪ್ರತ್ಯೇಕ ರಾಜ್ಯವಾದ ಸಂದರ್ಭ ಇದರಲ್ಲಿ 299 ಟಿಎಂಸಿ ಅಡಿ ನೀರು ತೆಲಂಗಾಣದ ಪಾಲಾಗಿತ್ತು. ಆದರೆ ಕೃಷ್ಣಾ ನದಿಯಲ್ಲಿ ತೆಲಂಗಾಣ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವುದರಿಂದ ಹೆಚ್ಚುವರಿಯಾಗಿ 300 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸಿದೆ. ಇನ್ನೊಂದೆಡೆ ಆಂಧ್ರಪ್ರದೇಶ ಕೂಡಾ ಹೆಚ್ಚುವರಿ ನೀರಿಗೆ ಬೇಡಿಕೆ ಸಲ್ಲಿಸಿ ನ್ಯಾಯಮಂಡಳಿಯ ಮೆಟ್ಟಿಲೇರಿತ್ತು.