×
Ad

ಕಾವೇರಿ ನೀರು ಹಂಚಿಕೆ ವಿಚಾರದ ಮೇಲ್ಮನವಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ

Update: 2016-10-19 20:04 IST

ಹೊಸದಿಲ್ಲಿ, ಅ.19: 2007ರ ಕಾವೇರಿ ಜಲವಿವಾದ ಮಂಡಳಿ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸಲ್ಲಿಸಿದ್ದ ಮೇಲ್ಮನವಿಯ ಸಮರ್ಥನೀಯತೆ ಬಗ್ಗೆ ಆದೇಶವನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.

‘ತೀರ್ಪು ಕಾಯ್ದಿರಿಸಲಾಗಿದೆ. ಮುಂದಿನ ಆದೇಶದವರೆಗೆ ಅ.18ರ ಮಧ್ಯಂತರ ಆದೇಶ ಜಾರಿಯಲ್ಲಿರುತ್ತದೆ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಮಿತವ ರಾಯ್ ಮತ್ತು ಎಂ.ಕೆ.ಖಾನ್ವಿಲ್ಕರ್ ಅವರನ್ನೊಳಗೊಂಡ ಪೀಠವೊಂದು ಹೇಳಿದೆ. ಸಂಬಂಧಪಟ್ಟ ರಾಜ್ಯಗಳು ತಮ್ಮ ಲಿಖಿತ ಹೇಳಿಕೆಗಳನ್ನು ಅಕ್ಟೋಬರ್ 24ರ ಮುಂಚೆ ಕೋರ್ಟ್‌ಗೆ ಸಲ್ಲಿಸಬೇಕು . ಆ ಬಳಿಕ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು, ಜಲವಿವಾದ ಮಂಡಳಿಯ ತೀರ್ಪು ಈ ಪ್ರಕರಣದಲ್ಲಿ ಅಂತಿಮ ನಿರ್ಣಯವಾಗಿದ್ದು ಮೇಲ್ಮನವಿ ಅರ್ಜಿಗಳ ವಿಚಾರಣೆ ಕೋರ್ಟ್ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದರು. ತನ್ನ ವಾದ ಮುಂದುವರಿಸಿದ ಕರ್ನಾಟಕದ ಪರ ವಕೀಲ ಫಾಲಿ ಎಸ್. ನಾರಿಮನ್ , ಜಲವಿವಾದ ಮಂಡಳಿಯ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಸಮರ್ಥನೀಯವಾಗಿದೆ ಎಂದರು. ಜಲವಿವಾದ ಮಂಡಳಿ ತೀರ್ಪು ಪ್ರಶ್ನಿಸಿ ರಾಜ್ಯಗಳು ಸಲ್ಲಿಸುವ ಮನವಿಗಳ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ಗೆ ಅಧಿಕಾರವಿದೆ ಎಂದರು. ತಮಿಳುನಾಡು ಸರಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಶೇಖರ್ ನಫಡೆ, ಮನವಿಗಳು ಸಮರ್ಥನೀಯವಾಗಿವೆ ಮತ್ತು ಯಾವುದೇ ಕಾಯ್ದೆ ಹೈಕೋರ್ಟ್‌ನ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು. ಸಂವಿಧಾನದ 136ನೇ ಪರಿಚ್ಛೇದದಡಿ ನೀಡಲಾಗಿರುವ ಸುಪ್ರೀಂಕೋರ್ಟ್‌ನ ವಿವಾದ ಪರಿಹರಿಸುವ ಅಧಿಕಾರವನ್ನು ಅಂತರ್ ರಾಜ್ಯ ಜಲವಿವಾದ ಕಾಯ್ದೆ 1956ರ ಸೆಕ್ಷನ್ 6(2) ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದವರು ನುಡಿದರು. ಇದೇ ರೀತಿ ಕೇರಳವೂ ಕರ್ನಾಟಕ ರಾಜ್ಯದ ನಿಲುವನ್ನು ಸಮರ್ಥಿಸಿತು. ಆದರೆ ಪುದುಚೇರಿಯು ಕೇಂದ್ರ ಸರಕಾರದ ನಿಲುವಿಗೆ ಬೆಂಬಲ ಸೂಚಿಸಿದ್ದು ಕರ್ನಾಟಕ, ತಮಿಳುನಾಡು, ಕೇರಳ ಸರಕಾರಗಳು ಸಲ್ಲಿಸಿದ್ದ ಮೇಲ್ಮನವಿ ಸಮರ್ಥನೀಯವಲ್ಲ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News